
Mallur, Sidlaghatta : ರೈತರು, ಗ್ರಾಮಸ್ಥರು ಮತ್ತು ನಾಗರಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವ ಜತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಯೂ ಗಮನ ಹರಿಸಿ, ಉತ್ತಮ ಬದುಕು ರೂಪಿಸಿ ಎಂದು ಮಳ್ಳೂರು ಪುವ್ವಾಡ ಫೌಂಡೇಷನ್ ನ ಡಾ.ಸಂದೀಪ್ ಪುವ್ವಾಡ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಸುಮಾರು 4 ಲಕ್ಷ ರೂ ಮೌಲ್ಯದ ಔಷಧಿಗಳನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಅನೇಕ ಮಂದಿ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹರಿಸದೆ ದುಡಿದು ಸಂಪಾದನೆ ಮಾಡುವುದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳದೆ ಸಂಪಾದಿಸಿದ ಹಣದಿಂದ ಆರೋಗ್ಯವನ್ನು ಕೊಳ್ಳಲು ಆಗುವುದಿಲ್ಲ ಎಂಬುದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಿ ಎಂದರು.
ಯಾವುದೇ ವ್ಯಕ್ತಿ ತಮಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಡ ಮಾಡಬೇಡಿ, ನಿರ್ಲಕ್ಷ್ಯವನ್ನೂ ಮಾಡಬೇಡಿ. ಮುಖ್ಯವಾಗಿ ಸ್ವಯಂ ಚಿಕಿತ್ಸೆಗೆ ಮುಂದಾಗಬೇಡಿ ಎಂದು ಮನವಿ ಮಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧವಾದ ಪ್ರಗತಿ ಆಗಿದೆ.
ಯಾವುದೇ ರೋಗವಾಗಲಿ ಆರಂಭದಲ್ಲೆ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಎಂತಹ ರೋಗವನ್ನಾದರೂ ಆರಂಭದಲ್ಲೆ ವಾಸಿ ಮಾಡಿಕೊಳ್ಳಬಹುದು ಎಂದರು.
ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಿಂದ ಸಾರ್ವಜನಿಕ ಅಸ್ಪತ್ರೆಗೆ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಔಷಧಿಗಳನ್ನು ಕೊಡುಗೆಯಾಗಿ ನೀಡಿದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್ ಔಷಧಿಗಳನ್ನು ಸ್ವೀಕರಿಸಿದರು.
ಎಚ್.ಡಿ.ದೇವೇಗೌಡ ಜಯಪ್ರಕಾಶ್ ನಾರಾಯಣ್ ಟ್ರಸ್ಟ್ ನ ಬಿ.ಎನ್.ಸಚಿನ್ ಮಾತನಾಡಿ, ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಪ್ರತಿ ಭಾನುವಾರ ನಾನಾ ರೀತಿಯ ಉಚಿತ ಆರೋಗ್ಯ ತಪಾಸಣೆ ಮತ್ತು ಔಷದೋಪಚಾರ ಶಿಬಿರ ನಡೆಯಲಿದ್ದು ಸುತ್ತ ಮುತ್ತಲಿನ ಅನೇಕರಿಗೆ ಇದರಿಂದ ಅನುಕೂಲ ಆಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರತೆ ಇರುವ ಹಲವು ರೀತಿಯ ಔಷಧಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದು ಇದರ ಸದುಪಯೋಗ ಅಗತ್ಯ ಇರುವ ಎಲ್ಲ ಅರ್ಹರಿಗೂ ಸಿಗಲಿ ಎಂದು ಆಶಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ಎಚ್.ಡಿ.ದೇವೇಗೌಡ ಜಯಪ್ರಕಾಶ್ ನಾರಾಯಣ್ ಟ್ರಸ್ಟ್ ನ ಬಿ.ಎನ್.ಸಚಿನ್, ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ಕಲಾವತಿವೀರಕುಮಾರ್, ಡಾ.ಸಂದೀಪ್ ಪುವ್ವಾಡ, ಡಾ.ಪ್ರಿಯಾಂಕ, ಡಾ.ಸತ್ಯವಂಶಿಕೃಷ್ಣ, ಡಾ.ವಿಶ್ಮ ಪ್ರಭು, ಡಾ.ಮಂಜುನಾಥ್, ಸ್ವಯಂಸೇವಕರು ಹಾಜರಿದ್ದರು.