
Sidlaghatta : ನಮ್ಮ ಹಿಂದೂ ಧರ್ಮದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಚ್ಯುತಿ ಬಂದಾಗ ಹಿಂದೂಗಳಾದ ನಾವೆಲ್ಲರೂ ಜಾತಿ ಪಕ್ಷ ಬಿಟ್ಟು ಒಂದಾಗಿ ಧರ್ಮ ರಕ್ಷಣೆಗಾಗಿ ನಿಲ್ಲಬೇಕು. ನಮ್ಮ ಸನಾತನ ಧರ್ಮವನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಯು ನೆಮ್ಮದಿಯಾಗಿ ಬದುಕುವ ವಾತಾವರಣವನ್ನು ನಿರ್ಮಿಸಬೇಕೆಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ ತಿಳಿಸಿದರು.
ಶಿಡ್ಲಘಟ್ಟದಿಂದ ಧರ್ಮಸ್ಥಳಕ್ಕೆ ಹೊರಟ ಧರ್ಮಯಾತ್ರೆಗೆ ಭಾನುವಾರ ನಗರದ ಅಶೋಕ ರಸ್ತೆಯ ದ್ವಿಮುಖ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗಲೆಲ್ಲಾ ಒಂದು ಕೋಮಿನವರನ್ನು ಸಂತೃಪ್ತಿ ಪಡಿಸಲು, ಅವರ ಮತಗಳಿಗಾಗಿ ಹಿಂದೂ ಧರ್ಮವನ್ನು ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿ ಮಾಡಿ, ಹಿಂದೂ ಧರ್ಮಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ದೂರಿದರು.
ಇದೀಗ ಧರ್ಮಸ್ಥಳ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಚ್ಯುತಿ ತರುವ ಕೆಲಸ ಮತ್ತು ಧರ್ಮಸ್ಥಳ ಮಂಜುನಾಥನ ಸನ್ನಿಧಿ ಬಗ್ಗೆ ಅಪಪ್ರಚಾರ ಮಾಡುವವರಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು. ಧರ್ಮಸ್ಥಳದ ಪವಿತ್ರತೆ ಬಗ್ಗೆ ಕುತಂತ್ರ ಮಾಡಿ ಷಡ್ಯಂತ್ರ ಮಾಡಿದವರ ಬೇರುಗಳು ನೆರೆ ರಾಜ್ಯ ನೆರೆ ದೇಶಗಳಿಗೂ ಹಬ್ಬಿದೆ. ಅವರೆಲ್ಲರನ್ನೂ ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು, ಧರ್ಮಸ್ಥಳದ ಬಗ್ಗೆ ಹಬ್ಬಿರುವ ಅಪಖ್ಯಾತಿ ಹೋಗಲಾಡಿಸಿ ಭಕ್ತರಲ್ಲಿ ಮತ್ತೆ ನಂಬಿಕೆ ಬರುವಂತೆ ಮಾಡಲು ಎನ್.ಐ.ಎಗೆ ತನಿಖೆಯ ಹೊಣೆ ಕೊಡಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳ ಧಾರ್ಮಿಕ ಕೇಂದ್ರದ ವಿರುದ್ದ ನಡೆದಿರುವ ಷಡ್ಯಂತ್ರವನ್ನು ವಿರೋಧಿಸಿ, ಷಡ್ಯಂತ್ರವನ್ನು ನಡೆಸಿರುವವರನ್ನು ಬಂಧಿಸಿ, ಎನ್.ಐ.ಎಗೆ ತನಿಖೆಗೆ ವಹಿಸುವಂತೆ ಆಗ್ರಹಿಸಿ ಶಿಡ್ಲಘಟ್ಟದಿಂದ ನೂರಾರು ಮಂದಿ ಧರ್ಮಸ್ಥಳಕ್ಕೆ ಧರ್ಮ ಯಾತ್ರೆ ಕೈಗೊಂಡಿದ್ದೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ನಾಯಕತ್ವದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದಲೂ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಧರ್ಮಯಾತ್ರೆಗೆ ಹೊರಟಿದ್ದು ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ನರೇಶ್, ಮುಖಂಡರಾದ ಕೊತ್ತನೂರು ಜಗದೀಶ್, ರಾಮಕೃಷ್ಣಪ್ಪ, ಬಾಲಕೃಷ್ಣ, ಚೆಲುವರಾಜು, ನಾರಾಯಣಸ್ವಾಮಿ, ಪ್ರಕಾಶ್ ಹಾಜರಿದ್ದರು.