Sidlaghatta : ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿರುವ BJP ಸೇವಾಸೌಧ ಕಚೇರಿಯಲ್ಲಿ ಭಾನುವಾರ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಮಾಡಿ ಬಳಿಕ ಮಾತನಾಡಿದ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಭಾರತವು ಸನಾತನ ಸಂಸ್ಕೃತಿ ಮತ್ತು ಯೋಗ ಪರಂಪರೆಯ ತವರೂರು ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆಯ ಪ್ರಸ್ತಾವನೆ ಮಂಡಿಸಿದ ಹಿನ್ನೆಲೆಯಲ್ಲಿ ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ತಾವು ಆರೋಗ್ಯವಾಗಿರುವುದರ ಜೊತೆಗೆ ಇತರರಿಗೂ ಯೋಗದ ಮಹತ್ವವನ್ನು ತಿಳಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಗ್ರಾಮಾಂತರ ಮಂಡಲಾಧ್ಯಕ್ಷ ಆನಂದ್ ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಯೋಗಾಸಕ್ತರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ನುರಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನ ಪ್ರಕ್ರಿಯೆಗಳನ್ನು ನಡೆಸಲಾಯಿತು. ಭಾಗವಹಿಸಿದ್ದವರು ಸಾಮೂಹಿಕ ಯೋಗಾಭ್ಯಾಸದ ಮೂಲಕ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಅರಿತುಕೊಂಡರು.
ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸುರೇಂದ್ರ ಗೌಡ, ನಗರ ಮಂಡಲ ಅಧ್ಯಕ್ಷ ದೇವರಾಜ್, ನರೇಶ್,ಅಭಿ, ಪತಂಜಲಿ ಯೋಗ ಶಿಕ್ಷಣದ ಕೇಶವಮೂರ್ತಿ, ರಾಮಚಂದ್ರಪ್ಪ, ರಘು, ಪುರುಷೋತ್ತಮ್, ಮಂಜುಳಾ, ಚೆಲುವರಾಜ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಮಹಿಳಾ ಮೋರ್ಚಾ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.








