Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದ್ದು, ಗಣತಿದಾರರು ಮನೆಗೆ ಬಂದಾಗ ಅಗತ್ಯ ಮಾಹಿತಿಯನ್ನು ನೀಡಿ ಸಹಕರಿಸುವಂತೆ ತಹಶೀಲ್ದಾರ್ ಎಸ್. ಗಗನ ಸಿಂಧು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಭಾನುವಾರ ನಗರದಲ್ಲಿನ ಸಿದ್ದಾರ್ಥನಗರ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿದ ತಹಶೀಲ್ದಾರ್ ಗಗನ ಸಿಂಧು ಅವರು, “ರಜೆ ದಿನವಾಗಿದ್ದರೂ ಸಮೀಕ್ಷೆ ಕಾರ್ಯ ನಿಲ್ಲದೆ ನಡೆದಿದ್ದು, ಸೋಮವಾರ ಮತ್ತು ಮಂಗಳವಾರವೂ ಸಮೀಕ್ಷೆ ಮುಂದುವರಿಯಲಿದೆ. ಗಣತಿದಾರರು ಮನೆಗೆ ಬಂದಾಗ ಕೇಳುವ ಪ್ರಶ್ನೆಗಳಿಗೆ ಸತ್ಯವಾದ ಉತ್ತರ ನೀಡಬೇಕು. ಆದರೆ ಕೆಲವು ಕಲಂಗಳಿಗೆ ಉತ್ತರ ನೀಡದಿದ್ದರೂ ಅದು ಕಡ್ಡಾಯವಲ್ಲ,” ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೆಲವು ತಾಂತ್ರಿಕ ಕಾರಣಗಳಿಂದ ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದಿದ್ದರೂ ಈಗಾಗಲೇ ಶೇ.76ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಉಳಿದ ಮನೆಗಳ ಸಮೀಕ್ಷೆ ಪೂರ್ಣಗೊಳ್ಳಲಿದೆ,” ಎಂದರು.
ಅವರು ಮುಂದುವರೆದು, “ಗಣತಿದಾರರು ಮನೆಗಳಿಗೆ ತೆರಳಿದಾಗ ನೆಟ್ವರ್ಕ್ ಸಮಸ್ಯೆ, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳ ಲಭ್ಯತೆ ಕೊರತೆ, ಓಟಿಪಿ ಪಡೆಯುವ ತಡ ಇತ್ಯಾದಿ ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ. ಆದರೆ ಈಗ ಅವು ಬಹುಮಟ್ಟಿಗೆ ನಿವಾರಣೆಯಾಗಿವೆ,” ಎಂದು ವಿವರಿಸಿದರು.
ತಹಶೀಲ್ದಾರ್ ಗಗನ ಸಿಂಧು ಅವರು ಜನರಲ್ಲಿ ಜಾಗೃತಿ ಮೂಡಿಸುತ್ತಾ, “ಯಾವುದೇ ಮನೆಗೆ ಗಣತಿದಾರರು ಭೇಟಿ ನೀಡದಿದ್ದರೆ ಸಹಾಯವಾಣಿ ಸಂಖ್ಯೆ 08158-256764 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಸಂಬಂಧಿತ ಗಣತಿದಾರರನ್ನು ತಕ್ಷಣ ಕಳುಹಿಸಲಾಗುತ್ತದೆ,” ಎಂದರು.
ಅವರು ಸಮೀಕ್ಷೆಯ ಶೇ.100 ಗುರಿ ತಲುಪುವ ನಿಟ್ಟಿನಲ್ಲಿ ನೋಡೆಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಜೆ ದಿನವಾದರೂ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಸಿ.ಎಂ. ಅಧಿಕಾರಿಗಳು ವಿಜಯ್ ಕುಮಾರ್, ನವೀನ್ ಕುಮಾರ್, ಮೇಲ್ವಿಚಾರಕರು ದೇವರಾಜ್, ವೆಂಕಟೇಶ್ ಹಾಗೂ ಗಣತಿದಾರರಾದ ನಳಿನ ಹಾಜರಿದ್ದರು.