Sidlaghatta : ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವೇಳೆ ಒಕ್ಕಲಿಗ ಸಮುದಾಯದವರು ಜವಾಬ್ದಾರಿ ಹಾಗೂ ವಿವೇಚನೆಯಿಂದ ವಾಸ್ತವಾಂಶದ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ದಾಖಲಾಗದಂತೆ ಎಚ್ಚರ ವಹಿಸುವಂತೆ ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯಿರುವ ಎಸ್.ಎಲ್.ವಿ ಕಲ್ಯಾಣ ಮಂಟಪದಲ್ಲಿ ಶ್ರೀಮಠ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ಮುಂಬರುವ ಜನಾಂಗದ ಜಾತಿ ಜನಗಣತಿ ಮತ್ತು ಸಾಮಾಜಿಕ, ಆರ್ಥಿಕ ಸಮೀಕ್ಷೆ ಕುರಿತು ಒಕ್ಕಲಿಗ ಸಮುದಾಯಕ್ಕೆ ಅರಿವು ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮುದಾಯದ ಯಾವುದೇ ಉಪಪಂಗಡಕ್ಕೆ ಸೇರಿದ್ದರೂ ಜಾತಿ ಕಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಿ. ಉಪ ಪಂಗಡಗಳನ್ನು ಉಪ ಜಾತಿ ಕಾಲಂನಲ್ಲಿ ಉಪಪಂಗಡಕ್ಕೆ ದಾಖಲಿಸಬೇಕು. ಜಾತಿ ಕಾಲಂನಲ್ಲಿ ಉಪ ಜಾತಿ ನಮೂದಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಸರಕಾರ ಸೆ.22 ರಿಂದ ಅ.07 ರವರೆಗೆ 15 ದಿನಗಳ ಕಾಲ ಹೊಸದಾಗಿ ಸಮಿಕ್ಷೆ ನಡೆಸಲಿದೆ, ಇದು ಬರೀ ಜನಗಣತಿ ಅಲ್ಲ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ, 1931ರಲ್ಲಿ ನಡೆದಿದ್ದ ಸಾಮಾಜಿಕ, ಶೈಕ್ಷಣಿಕ ಜಾತಿ ಜನಗಣತಿ ನಂತರ ಇದೀಗ ನಡೆಯುತ್ತಿದೆ ಎಂದರು.
ಒಕ್ಕಲಿಗರ ಸಂಘದ ರಾಜ್ಯ ಗೌರವಾಧ್ಯಕ್ಷ ಯಲವಹಳ್ಳಿ ಎನ್.ರಮೇಶ್, ನಿರ್ದೇಶಕರಾದ ಡಾ.ಡಿ.ಕೆ.ರಮೇಶ್, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಸೀಕಲ್ ಆನಂದಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಯುವ ಸೇನಾದ್ಯಕ್ಷ ಜೆ.ವೆಂಕಟಸ್ವಾಮಿ, ರಾಜ್ಯ ರೈತ ಸಂಘದ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರೈತ ಸಂಘದ ಮುಖಂಡರಾದ ಬೆಳ್ಳೂಟಿ ಬಿಕೆ.ಮುನಿಕೆಂಪಣ್ಣ, ರವಿಪ್ರಕಾಶ್, ಯುವ ಮುಖಂಡ ಯಲುವಹಳ್ಳಿ ಜನಾರ್ಧನ್, ತಾಲ್ಲೂಕಿನ ವಿವಿಧ ಸಂಘಟನೆಗಳ ಅಧ್ಯಕ್ಷರು, ಪಧಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಹಾಜರಿದ್ದರು.