Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ, ಬೇರೆ ತಾಲ್ಲೂಕುಗಳಿಂದ ಬರುವ ನೂಲು ಬಿಚ್ಚಣಿಕೆದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು ಎಂದು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವನ್ನು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಅವರು ಬುಧವಾರ ಎತ್ತಿಹಿಡಿದರು.
ಅವರು ಮಾತನಾಡುತ್ತಾ, “ಶಿಡ್ಲಘಟ್ಟ ಮಾರುಕಟ್ಟೆಗೆ ದಿನಕ್ಕೆ ಸರಾಸರಿ 300–400 ಲಾಟ್ ರೇಷ್ಮೆ ಗೂಡು ಬರುತ್ತಿದೆ. ನಮ್ಮ ಗೂಡಿಗೆ ಉತ್ತಮ ಬೆಲೆ ಬರಬೇಕಾದರೆ, ಚಿಂತಾಮಣಿ ಸೇರಿದಂತೆ ಬೇರೆ ತಾಲ್ಲೂಕುಗಳಿಂದ ಬಿಚ್ಚಣಿಕೆದಾರರು ಬಂದು ಹರಾಜಿನಲ್ಲಿ ಪಾಲ್ಗೊಳ್ಳಬೇಕು. ಆದರೆ ಈಗ ಕೇವಲ ₹600–₹680 ರಷ್ಟೇ ಬೆಲೆ ಸಿಗುತ್ತಿದೆ. ಹೆಚ್ಚು ಸ್ಪರ್ಧೆ ಬಂದರೆ ₹800–₹1000 ದವರೆಗೆ ಬೆಲೆ ಬರಬಹುದಾಗಿದೆ,” ಎಂದರು.
“ಶಿಡ್ಲಘಟ್ಟದಲ್ಲೇ 1,800 ಕ್ಕೂ ಹೆಚ್ಚು ಬಿಚ್ಚಣಿಕೆದಾರರು ಇದ್ದರೂ, ಅವರು ಸ್ಪರ್ಧಾತ್ಮಕ ಬೆಲೆ ನೀಡದ ಹಿನ್ನಲೆಯಲ್ಲಿ, ರೈತರಿಗೆ ನಷ್ಟವಾಗುತ್ತಿದೆ. ಹೊರ ಜಿಲ್ಲೆಗಳ ಬಿಚ್ಚಣಿಕೆದಾರರಿಗೆ ಅವಕಾಶ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾರುಕಟ್ಟೆ ಉಪನಿರ್ದೇಶಕ ಎನ್. ಉಮೇಶ್, “ನಾನು ಯಾರನ್ನೂ ಗುರಿಯಾಗಿಸಿ ತಡೆಯಿಲ್ಲ. ಎಲ್ಲರಿಗೂ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ. ಯಾವುದೇ ರೀತಿ ನಿರ್ಬಂಧವಿಲ್ಲ” ಎಂದು ಸ್ಪಷ್ಟನೆ ನೀಡಿದರು.
ರೈತ ಮುಖಂಡರು ಎಸ್.ಆರ್. ಮಂಜುನಾಥ್, ಬೈರೇಗೌಡ, ಮಾಧವಚಾರ್, ಹರಿಕೃಷ್ಣ ಹಾಗೂ ನಾಗರಾಜ್ ಈ ವೇಳೆ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366









