Chowdasandra, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ 15 ವರ್ಷಗಳ ನಂತರ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಮೂರು ದಿನ ಗ್ರಾಮಸ್ಥರೆಲ್ಲರೂ ಸೇರಿ ಸೌಹಾರ್ಧತೆಯಿಂದ ಆಚರಿಸಿದರು.
ಸೋಮವಾರ ಗ್ರಾಮ ದೇವರುಗಳಾದ ಶ್ರೀಆಂಜನೇಯಸ್ವಾಮಿ, ಶ್ರೀಸೋಮೇಶ್ವರಸ್ವಾಮಿ, ಶ್ರೀಗಣೇಶ , ಶ್ರೀ ವೆಂಕಟರಮಣಸ್ವಾಮಿ, ಶ್ರೀಶನೇಶ್ವರಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಗ್ರಾಮದೇವತೆಗಳಾದ ಶ್ರೀಸಪ್ಪಲಮ್ಮ ದೇವಿ, ಶ್ರೀಗಂಗಮ್ಮ ದೇವಿ, ಶ್ರೀಸುಗ್ಗಲಮ್ಮ ದೇವಿ, ಶ್ರೀ ಮಾರಿಯಮ್ಮ ದೇವಿ, ಕಾಟೇರಮ್ಮ ದೇವಿ ದೇವಾಲಯಗಳಲ್ಲಿ ದೀಪ ಬೆಳಗಿ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಗ್ರಾಮದ ಪ್ರತಿಯೊಂದು ಮನೆಯಿಂದಲೂ ಗೃಹಿಣಿಯರು, ಹೆಂಗಳೆಯರು, ತವರಿಗೆ ಬಂದ ಹೆಣ್ಣು ಮಕ್ಕಳು ತಲೆ ಮೇಲೆ ತಂಬಿಟ್ಟಿನ ದೀಪ ಹೊತ್ತು ಗ್ರಾಮ ಹಾಗೂ ದೇವಾಲಯಗಳ ಪ್ರದಕ್ಷಿಣೆ ಹಾಕಿ ಭಕ್ತಿ ಬಾವದಿಂದ ತಂಬಿಟ್ಟು ದೀಪದಾರತಿಗಳನ್ನು ಬೆಳಗಿದರು.
ಮಂಗಳವಾದ್ಯ, ತಮಟೆ ವಾದ್ಯ ಸೇರಿದಂತೆ ವಿವಿಧ ಕಲಾತಂಡಗಳ ತಾಳ ಮನರಂಜಿಸಿತು. ಗ್ರಾಮದ ದೇವಾಲಯಗಳಿಗೆ, ಪ್ರಮುಖ ರಸ್ತೆಗಳು ಹಾಗೂ ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮತ್ತು ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ಗ್ರಾಮದ ಜಾತ್ರಾ ಮಹೋತ್ಸವಕ್ಕೆ ಕಳೆಕಟ್ಟಿತ್ತು.
15 ವರ್ಷಗಳ ನಂತರ ಗ್ರಾಮದಲ್ಲಿ ನಡೆದ ಊರ ಜಾತ್ರೆಯಲ್ಲಿ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸಿದ್ದರು.