Sidlaghatta : ಕಳೆದ ಚುನಾವಣೆಯಲ್ಲಿ ರಾಜೀವ್ ಗೌಡರಲ್ಲ, ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಹೋಗಿರೋದು. ಹಾಗೆ ಆಗಲು ಏನು ಕಾರಣ ಎಂಬುದು ಉಸ್ತುವಾರಿ ಸಚಿವರಿಗೂ ನಮಗೂ, ಎಲ್ಲರಿಗೂ ಗೊತ್ತಿದೆ. ಡಬಲ್ ಗೇಮ್ ಆಡುವ ಕಾರ್ಯಕರ್ತರಿಗೆ ಸಚಿವರು ಮಣೆ ಹಾಕಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ತಿಳಿಸಿದರು.
ಕೇಂದ್ರದ ಬಿಜೆಪಿ ಸರ್ಕಾರವು ಅಕ್ರಮ ಮತದಾರರ ಪಟ್ಟಿಯನ್ನು ಸೃಷ್ಟಿಸುತ್ತಿದೆ ಎಂದು ಆಗಸ್ಟ್ 5 ರಂದು ಬೆಂಗಳೂರಲ್ಲಿ ಕಾಂಗ್ರೆಸ್ ನಿಂದ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನಲೆಯಲ್ಲಿ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜೀವ್ ಗೌಡರನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ಯಾರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೋ, ಪಕ್ಷದ ಪರವಾಗಿ ದುಡಿದಿರುವರೋ ಅವರಿಗೆ ಮೊದಲ ಪ್ರಾಧಾನ್ಯತೆ ನೀಡಿ. ಪಕ್ಷದ ಬಲವರ್ಧನೆಗಾಗಿ ಹೊರಗಿನಿಂದ ಬಂದವರಿಗೂ ಅವಕಾಶ ಮಾಡಿಕೊಡಲು ನಾವು ಸಿದ್ಧವಾಗಿದ್ದೇವೆ. ಶಿಡ್ಲಘಟ್ಟದಲ್ಲಿ ಮೂರು ಕಾಂಗ್ರೆಸ್ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಪ್ರಥಮ ಆದ್ಯತೆಯನ್ನು ಕೊಡಬೇಕು. ಅವರಿವರು ಹೇಳುವ ಮಾತುಗಳಿಗೆ ಸಚಿವರು ಕಿವಿಗೊಡಬಾರದು ಎಂದರು.
ಸಚಿವರು ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಎರಡನೇ ಸ್ಥಾನ ಪಡೆದವರಿಗೆ ಸ್ಥಾನಮಾನ ಕೊಡಬೇಕು ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಹೋಗಲು ಕಾರಣರಾದವರು, 2018 ರ ಚುನಾವಣೆಯಲ್ಲೂ ಹಿರಿಯ ಕಾಂಗ್ರೆಸ್ ನಾಯಕ ವಿ.ಮುನಿಯಪ್ಪ ಅವರಿಗೂ ತೊಂದರೆ ಕೊಟ್ಟಿದ್ದಾರೆ. ಈಗ ಅವರು ಪಕ್ಷದ ಬಲವರ್ಧನೆಗಾಗಿ ಬಂದಿದ್ದಾರೆ. ಅವರಿಗೆ ಸ್ವಾಗತವಿದೆ ಎಂದು ಹೆಸರು ಹೇಳದೇ ಪುಟ್ಟು ಆಂಜಿನಪ್ಪ ಅವರ ಬಗ್ಗೆ ಹೇಳಿದರು. ನಮ್ಮ ಆಗ್ರಹವೇನಿದ್ದರೂ ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದಾಗಿದೆ ಎಂದರು.
ನಾಣ್ಯ ಮಾತ್ರ ಸದ್ದು ಮಾಡುವುದು, ನೋಟು ಸದ್ದು ಮಾಡುವುದಿಲ್ಲ. ಕೆಲವರು ಅತ್ತು ಕರೆದು ನಾಟಕ ಮಾಡುತ್ತಿದ್ದಾರೆ. ಅಳುವ ಗಂಡಸನ್ನು ಯಾವತ್ತೂ ನಂಬಬಾರದು. ಯಾರು ಶಿಸ್ತಿನಿಂದ ಪಕ್ಷದ ಪರವಾಗಿ ನಿಂತಿರುವರೋ ಅವರನ್ನು ಮಾತ್ರ ನಂಬಬೇಕು. ಪಕ್ಷದ ಉಳಿವಿಗಾಗಿ ದುಡಿಯುವವರು ನಾವು ಎಂದು ನುಡಿದರು.
ಕೆಪಿಸಿಸಿ ಸಂಯೋಜಕ ಬಿ.ವಿ.ರಾಜೀವ್ ಗೌಡ ಮಾತನಾಡಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ 103 ಡೈರಿ ನಾಮನಿರ್ದೇಶನಗಳನ್ನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡಿಸಿದ್ದೇನೆ. ಕೆಲವರಿರುತ್ತಾರೆ ಅಧಿಕಾರವಿದ್ದಾಗ ಕಾಂಗ್ರೆಸ್ ನಿಂದ ಉಪಯೋಗ ಪಡೆದುಕೊಳ್ಳುವುದು, ನಂತರ ಬೇರೆಡೆಗೆ ಹೋಗುತ್ತಾರೆ. ಅಂತಹವರು ರಾಜಕೀಯ ಮಾಡಬಾರದು, ಕಾಂಗ್ರೆಸ್ ಪಕ್ಷಕ್ಕೆ ಬರಬಾರದು. ನಗರಸಭೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತವಿತ್ತು. ಆದರೆ ನಮ್ಮಲ್ಲಿಯೇ ಇದ್ದ ಮೋಸಗಾರರು ಬೇರೆಡೆಗೆ ಹೋದರು. ಅವರನ್ನು ಅಮಾನತ್ತು ಮಾಡಿಸಿದೆವು. ಅವರು ಈಗ ಫೋನ್ ಮಾಡಿ ನಮ್ಮನ್ನು ಯಾರೋ ದಿಕ್ಕು ತಪ್ಪಿಸಿದರು ಎಂದು ಹೇಳುತ್ತಿದ್ದಾರೆ. ಎಲ್ಲೋ ಎ.ಸಿ ಕೋಣೆಯಲ್ಲಿ ಕುಳಿತು ಪಕ್ಷವನ್ನು ಹಾಳು ಮಾಡುವ ಕೆಲಸ ಮಾಡಬಾರದು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತುಹಾಕುತ್ತೇವೆ ಎಂದು ಹೇಳಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಹೆಮ್ಮರವಾಗಿ ಬೆಳೆದಿದೆ. ಸುಭದ್ರವಾಗಿಯೂ ಇದೆ. ಸೀಕಲ್ ರಾಮಚಂದ್ರಗೌಡ ಅವರು ಕಾಂಗ್ರೆಸ್ ನ್ನು ಮೊಳಕೆಯಲ್ಲೇ ಕಿತ್ತಾಕುವ ಚಿಂತೆ ಬಿಟ್ಟು ಬಿಜೆಪಿ ಪಕ್ಷವನ್ನು ಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕೆಲಸ ಮಾಡಲಿ. ಕಾಂಗ್ರೆಸ್ ಬಗ್ಗೆ ಹೇಳಿಕೆ ಕೊಡುವ ಮುಂಚೆ ಯೋಚಿಸಿ ಕೊಡಿ ಎಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್‌ನ ಉಸ್ತುವಾರಿ ಉದಯಕುಮಾರ್, ಕೃಷ್ಣಾರೆಡ್ಡಿ, ಕೆ.ಗುಡಿಯಪ್ಪ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ಟಿ.ಕೆ.ನಟರಾಜ್, ಅಫ್ಸರ್ ಪಾಷ, ಚಿದಾನಂದಮೂರ್ತಿ, ಹೀರೆಬಲ್ಲ ರವಿ, ಮಾದೇನಹಳ್ಳಿ ರವಿ, ಗುಡಿಹಳ್ಳಿ ನಾರಾಯಣಸ್ವಾಮಿ, ಮುನೀಂದ್ರ, ಗಾಯಿತ್ರಮ್ಮ ಹಾಜರಿದ್ದರು.
ಪ್ರತಿಭಟನೆಗೆ 5 ಸಾವಿರ ಮಂದಿ
ಆಗಷ್ಟ್ 5 ರಂದು ಬೆಂಗಳೂರಲ್ಲಿ ಕಾಂಗ್ರೆಸ್ ನಿಂದ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಶಿಡ್ಲಘಟ್ಟ ಕ್ಷೇತ್ರದಿಂದ 5 ಸಾವಿರ ಕಾರ್ಯಕರ್ತರು ತೆರಳಬೇಕಿದ್ದು ಅಂದು ಬೆಳಗ್ಗೆ 7 ಗಂಟೆಗೆ ಎಲ್ಲ ಗ್ರಾಮ ಪಂಚಾಯಿತಿಗಳಿಂದಲೂ ಬಸ್ ವ್ಯವಸ್ಥೆ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು, ಎಲ್ಲ ಮುಖಂಡರು ತಮ್ಮ ಶಕ್ತಿ ಮೀರಿ ಕೆಲಸ ಮಾಡಬೇಕೆಂದು ಕೆಪಿಸಿಸಿ ಸಂಯೋಜಕ ಬಿ.ವಿ.ರಾಜೀವ್ ಗೌಡ ಕೋರಿದರು.