ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳು, ನಿಗಮ, ಸ್ಥಳೀಯ ಸಂಸ್ಥೆಗಳಲ್ಲಿ ನಾಮ ನಿರ್ದೇಶನ ಸ್ಥಾನಗಳಲ್ಲಿ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರನ್ನು ಕೂಡಲೆ ನೇಮಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ. ಹಿಂದುಳಿದ ವರ್ಗಗಳ ಕಾರ್ಯಕರ್ತರೆ ಪಕ್ಷದ ನಾಯಕರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು DCC ಬ್ಯಾಂಕ್‌ನ ನಿರ್ದೇಶಕ ಹಾಗೂ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ.ನಾಗರಾಜ್ ಎಚ್ಚರಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಯಿತು. ಇದುವರೆಗೂ ಶಿಡ್ಲಘಟ್ಟ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಾಮ ನಿರ್ದೇಶನ ಸ್ಥಾನಗಳನ್ನು ತುಂಬಿಲ್ಲ ಎಂದು ದೂರಿದರು.
ಇದರಿಂದ ಅಭಿವೃದ್ದಿಗೆ ಅಡೆತಡೆ ಆಗುತ್ತಿದೆಯಲ್ಲದೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೂ ನಿರಾಶೆ ಆಗಿದೆ ಎಂದು ಆಪಾದಿಸಿದರು.
ಈಗಾಗಲೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡಲು ಮೂರ್‍ನಾಲ್ಕು ಬಾರಿ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ಅವರಿಗೆ ಕೊಟ್ಟರೂ ಶಿಡ್ಲಘಟ್ಟದಲ್ಲಿ ರಾಜೀವ್‌ಗೌಡ ಮತ್ತು ಪುಟ್ಟು ಆಂಜಿನಪ್ಪ ಬಣಗಳು ಇವೆ ಎಂದು ಸಬೂಬು ಹೇಳಿ ನೇಮಕ ಮಾಡುತ್ತಿಲ್ಲ. ಆದರೆ ಅಧಿಕಾರಿಗಳ ವರ್ಗಾವಣೆಗೆ ಮಾತ್ರ ಬಣಗಳು ಇಲ್ಲವಾ, ನೀವು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿರುವುದು ಅಭಿವೃದ್ದಿ ಕಾರ್ಯಗಳನ್ನು ಮಾಡಲೋ ಅಥವಾ ಅಧಿಕಾರಿಗಳ ವರ್ಗಾವಣೆ ಮಾಡಲು ಮಾತ್ರವಾ ಎಂದು ಗಂಭೀರ ಆರೋಪ ಮಾಡಿದರು.
ಚಿಂತಾಮಣಿಯಲ್ಲಿ ಎಲ್ಲ ಅಭಿವೃದ್ದಿ ಕೆಲಸಗಳು, ನಾಮ ನಿರ್ದೇಶಕ ಸ್ಥಾನಗಳ ಭರ್ತಿ ಆಗುತ್ತಿದೆ. ಆಗಲಿ ನಮ್ಮದೇನು ತಕರಾರು ಇಲ್ಲ. ಆದರೆ ಜಿಲ್ಲೆಯ ಇತರೆ ತಾಲೂಕುಗಳ ಜನ ಸಾಮಾನ್ಯರು, ಕಾಂಗ್ರೆಸ್‌ನ ಕಾರ್ಯಕರ್ತರು ಏನು ಪಾಪ ಮಾಡಿದ್ದಾರೆ ಸ್ವಾಮಿ ಎಂದು ಪ್ರಶ್ನಿಸಿದರು.
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳು ಇಲ್ಲ. ಆದರೆ ನೀವೇ ಬಣಗಳ ನೆಪ ಹೇಳಿ ನಾಮ ನಿರ್ದೇಶಕ ಸ್ಥಾನಗಳ ಭರ್ತಿ ಮಾಡುತ್ತಿಲ್ಲ. ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ. ನೀವೇ ಬಣಗಳನ್ನು ಸೃಷ್ಟಿ ಮಾಡಿ, ನಮ್ಮ ತಾಲೂಕು ಹಿಂದುಳಿಯಲು ನೀವೇ ಕಾರಣ ಆಗುತ್ತಿದ್ದೀರಿ ಎಂದು ನೇರವಾಗಿ ಆರೋಪಿಸಿದರು.
ನಮ್ಮ ಶಿಡ್ಲಘಟ್ಟ ಕ್ಷೇತ್ರದಲ್ಲಿ ಮೂರ್‍ನಾಲ್ಕು ದಶಕಗಳಿಂದಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಇಲ್ಲಿ ಕಾಂಗ್ರೆಸ್‌ನ ಶಾಸಕರು ಇರೊಲ್ಲ. ಇದೀಗ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲ. ಎಲ್ಲಿ ಕಾಂಗ್ರೆಸ್‌ನ ಶಾಸಕರು ಇರುವುದಿಲ್ಲವೋ ಆ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ, ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ನಿಲ್ಲಬೇಕು ತಾನೇ. ಆದರೆ ನೀವು ಏನು ಮಾಡುತ್ತಿದ್ದೀರಿ ತೋರಿಸಿ ಎಂದು ಸವಾಲು ಹಾಕಿದರು.
ರೈತರು, ಮಹಿಳೆಯರ ಪರ ನಿಲ್ಲಿ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮತ್ತು ಮಹಿಳೆಯರ ಪಾಲಿಗೆ ಅಕ್ಷಯ ಪಾತ್ರೆಯಂತಿದ್ದ ಡಿಸಿಸಿ ಬ್ಯಾಂಕ್‌ಗೆ ಚುನಾವಣೆ ನಡೆದು ಒಂದೂವರೆ ತಿಂಗಳು ಆಯಿತು. ಕಾಂಗ್ರೆಸ್ ಬೆಂಬಲಿತರೆ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿದ್ದಾರೆ. ಇಬ್ಬರು ಸಚಿವರು ಇದ್ದೀರಿ, ಇದುವರೆಗೂ ಒಂದೇ ಒಂದು ಸಭೆಯನ್ನಾದರೂ ನಡೆಸಿದ್ದೀರಾ, ಇಲ್ಲ ಏಕೆ ಎಂದು ಪ್ರಶ್ನಿಸಿದರು.
ನಿಮಗೆ ಡಿಸಿಸಿ ಬ್ಯಾಂಕ್‌ನ್ನು ಉಳಿಸಬೇಕೆಂಬ ಮನಸೇ ಇಲ್ಲ. ಇದ್ದಿದ್ದರೆ ಇಷ್ಟೊತ್ತಿಗಾಗಲೆ ಸಭೆ ಕರೆದು ಆಡಳಿತ ಮಂಡಳಿ ರಚಿಸಿ ರೈತರಿಗೆ, ಮಹಿಳೆಯರಿಗೆ ಸಾಲ ಇನ್ನಿತರೆ ಸವಲತ್ತುಗಳನ್ನು ನೀಡುವ ಕೆಲಸ ಮಾಡುತ್ತಿದ್ದೀರಿ. ಆದರೆ ಆ ಮನಸು ನಿಮಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೀವು ಚಿಂತಾಮಣಿಗೆ ಮಾತ್ರ ಸಚಿವರಲ್ಲ. ಇಡೀ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದು ಅಭಿವೃದ್ದಿ ಜತೆಗೆ ಜಿಲ್ಲೆಯಲ್ಲಿ ಎಲ್ಲಿ ಕಾಂಗ್ರೆಸ್‌ನ ಶಾಸಕರು ಇಲ್ಲವೋ ಅಲ್ಲಿ ಪಕ್ಷವನ್ನು ಕಟ್ಟುವ ಕೆಲಸವನ್ನು ಕೂಡ ಮಾಡಿ, ಕೇವಲ ಚಿಂತಾಮಣಿಗೆ ಸೀಮಿತರಾಗಬೇಡಿ ಎಂದು ಮನವಿ ಮಾಡಿದರು.
ಪೌರಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಮುರಳಿ, ಕೆಪಿಸಿಸಿ ರಾಜ್ಯ ಸಂಚಾಲಕ ಎಸ್‌ಸಿ ಘಟಕ, ನಾರಾಯಣಸ್ವಾಮಿ, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಮಂಜುನಾಥ್, ಮುಖಂಡರಾದ ಕೆ.ಶ್ರೀನಾಥ್, ರಾಮಾಂಜಿ, ಅಫೀಸ್‌ಉಲ್ಲಾ, ಎಂ.ನಾಗರಾಜ್, ಎಮ.ಮಂಜುನಾಥ್ ಮತ್ತಿತರರು ಹಾಜರಿದ್ದರು.