Sidlghatta, chikkaballapur : ಶಿಡ್ಲಘಟ್ಟ ನಗರದಲ್ಲಿ ಸೋಮವಾರ ಬಿಜೆಪಿ ಸರ್ಕಾರವು ಮತಗಳ್ಳತನ ನಡೆಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಪಕ್ಷವು “ವೋಟ್ ಚೋರ್, ಗದ್ದಿ ಛೋಡ್” ಸಹಿ ಸಂಗ್ರಹ ಅಭಿಯಾನವನ್ನು ಭಾರಿ ಉತ್ಸಾಹದಿಂದ ಪ್ರಾರಂಭಿಸಿತು. ಈ ಅಭಿಯಾನಕ್ಕೆ ಮಾಜಿ ಶಾಸಕ ವಿ. ಮುನಿಯಪ್ಪ ಚಾಲನೆ ನೀಡಿದರು.
ನಗರದ ಬಸ್ ನಿಲ್ದಾಣದಿಂದ ಕಾಂಗ್ರೆಸ್ ಕಚೇರಿಯವರೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತಗಳ್ಳತನ ವಿರೋಧಿಸಿ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದರು. “ವೋಟ್ ಚೋರ್ ಗದ್ದಿ ಛೋಡ್”, “ಪ್ರಜಾಪ್ರಭುತ್ವ ಉಳಿಸಿ” ಎಂಬ ಘೋಷಣೆಗಳೊಂದಿಗೆ ನಗರ ಬೀದಿಗಳು ಮೊಳಗಿದವು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಕೋಚಿಮುಲ್ ನಿರ್ದೇಶಕ ಆರ್. ಶ್ರೀನಿವಾಸ್, “ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಅಪಾಯದಲ್ಲಿದೆ. ಚುನಾವಣಾ ಆಯೋಗದ ಸಹಕಾರದಿಂದ ಬಿಜೆಪಿ ಸರ್ಕಾರ ಮತಗಳ್ಳತನ ಮಾಡುತ್ತಿದೆ ಎಂಬುದು ಜನರ ಮುಂದೆ ಬರುತ್ತಿದೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯಬೇಕು ಎಂಬುದು ಕಾಂಗ್ರೆಸ್ ಪಕ್ಷದ ಒತ್ತಾಯ,” ಎಂದು ಹೇಳಿದರು.
ಅವರು ಮುಂದುವರಿದು, “ಮತಗಳ್ಳತನದ ವಿರುದ್ಧ ಜಾಗೃತಿ ಮೂಡಿಸಲು ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಈ ಚಳುವಳಿಯನ್ನು ಆರಂಭಿಸಿದೆ. ಜನರು ಎಚ್ಚರಿಕೆಯಿಂದ ಇರಬೇಕು, ಇಲ್ಲವಾದರೆ ಪ್ರಜಾಪ್ರಭುತ್ವವೇ ಅಪಾಯಕ್ಕೆ ಸಿಲುಕುತ್ತದೆ,” ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಬೇರ ಅಚ್ಚು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಬ್ರಮಣಿ, ಪುಟ್ಟು ಆಂಜಿನಪ್ಪ, ಗ್ರಾಮಪಂಚಾಯಿತಿ ಸದಸ್ಯೆ ಬೆಳ್ಳೂಟಿ ವರಲಕ್ಷ್ಮಿ ಸಂತೋಷ್, ಗುಡಿಹಳ್ಳಿ ಚಂದ್ರಶೇಖರ್, ಕ್ಯಾತಪ್ಪ, ಗೌಡನಹಳ್ಳಿ ಮಂಜುನಾಥ್, ರಾಜಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್, ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಚಂದ್ರ ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
For Daily Updates WhatsApp ‘HI’ to 7406303366









