Sidlaghatta : ಶಿಡ್ಲಘಟ್ಟ ನಗರದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆಯನ್ನು ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಮಾತನಾಡಿ, “ಜಪಾನಿನ ಮಿಯಾವಾಕಿ ಪದ್ಧತಿಯಲ್ಲಿ 50×50 ಅಡಿ ಜಾಗದಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ. ಕಡಿಮೆ ಜಾಗದಲ್ಲಿ ಸ್ಥಳೀಯ ಗಿಡಗಳನ್ನು ದಟ್ಟವಾಗಿ ನೆಡುವುದರಿಂದ 10 ಪಟ್ಟು ತ್ವರಿತ ಬೆಳವಣಿಗೆ ಮತ್ತು 30 ಪಟ್ಟು ದಟ್ಟತೆ ಸಾಧ್ಯವಾಗುತ್ತದೆ. ಮಿಯಾವಾಕಿ ಪದ್ಧತಿ ಜೈವಿಕ ವೈವಿಧ್ಯತೆಯನ್ನು (ಬಯೋಡೈವರ್ಸಿಟಿ) ಗಣನೀಯವಾಗಿ ಹೆಚ್ಚಿಸುತ್ತದೆ, ಏಕೆಂದರೆ ಇದು 30-50 ವಿವಿಧ ಸ್ಥಳೀಯ ಗಿಡಮರಗಳನ್ನು ದಟ್ಟವಾಗಿ ನೆಡುವುದರಿಂದ ಪಕ್ಷಿ, ದುಂಬಿ, ಚಿಟ್ಟೆ, ಇರುವೆಗಳಂತಹ ಸಾವಿರಾರು ಜೀವಿಗಳಿಗೆ ಆಶ್ರಯ ಮತ್ತು ಆಹಾರ ನೀಡುತ್ತದೆ. ನೆಟ್ಟ ಗಿಡಗಳನ್ನು ಎರಡು ವರ್ಶ್ಗಕಾಲವಾದರೂ ಪೋಷಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ. ಪ್ಲಾಸ್ಟಿಕ್ ಬಳಕೆಯನ್ನು ಎಲ್ಲರೂ ತ್ಯಜಿಸಿ ಭೂಮಿಯನ್ನು ಉಳಿಸಿ” ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ಈ ದಿನ ನೆಟ್ಟಗಿಡಗಳಿಗೆ ಹನಿನೀರಾವರಿ ಪೈಪ್ ಗಳನ್ನು ಅಳವಡಿಸುತ್ತೇವೆ. ಪ್ರತಿಯೊಂದು ಗಿಡವನ್ನೂ ಕಾಪಾಡಿ, ಪೋಷಿಸುತ್ತೇವೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ.ಎಸ್., ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಆರ್.ಮುನಿಶಾಮಿಗೌಡ, ವಲಯ ಅರಣ್ಯಾಧಿಕಾರಿ ರಾಜೇಶ್ ಗವಾಲ್ ಹಾಜರಿದ್ದರು.








