Sidlaghatta, chikkaballapur : ರಾಜ್ಯದ 21 ಜಿಲ್ಲಾ ಕೇಂದ್ರ ಸಹಕಾರಿ (DCC) ಬ್ಯಾಂಕ್‌ಗಳಿಂದ ಈ ಬಾರಿ ಸಕಾಲಕ್ಕೆ ರೈತರಿಗೆ ಬೆಳೆಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆಯಾಗದೆ, ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವುದಾಗಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ–ಚಿಕ್ಕಬಳ್ಳಾಪುರ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಸೋಮವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ–2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಹಿಂದೆ ಸರ್ಕಾರ NABARD ಮೂಲಕ 60% ಸಾಲದ ಮೊತ್ತ ನೀಡುತ್ತಿತ್ತು, ಉಳಿದ 40% ಬ್ಯಾಂಕ್ ಹೊತ್ತಿತ್ತು. ಆದರೆ ಈಗ ಬ್ಯಾಂಕ್‌ಗಳಿಗೆ ಕೇವಲ 40% ಮಾತ್ರ ಸಿಗುವಂತಾಗಿದೆ. ಇದರಿಂದ ಡಿಸಿಸಿ ಬ್ಯಾಂಕ್‌ಗಳ ಸಾಲ ವಿತರಣಾ ವ್ಯವಸ್ಥೆ ಕುಸಿದಿದೆ” ಎಂದು ವಿವರಿಸಿದರು.
ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಿದಾಗಲೇ ಕೃಷಿಕರಿಗೆ ಲಾಭವಾಗುತ್ತದೆ. ಜಾತಿ–ಧರ್ಮ–ಪಕ್ಷಭೇದವಿಲ್ಲದೆ ಕಾರ್ಯ ನಿರ್ವಹಿಸುವಂತೆ ನಾಗರಾಜ್ ಮನವಿ ಮಾಡಿದರು.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ
ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ನಾಗರಾಜ್ ಮಾತನಾಡುತ್ತಾ, “ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಯಬಾರದು ಎಂದು ಹೇಳುವವರು ತಾವೇ ಪಾಲಿಸುವುದಿಲ್ಲ. ಇದರ ಪರಿಣಾಮವಾಗಿ ಸಾಲ ವಿತರಣೆ ವಿಳಂಬವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಹಾಪ್‌ಕಾಮ್ಸ್ ನಿರ್ದೇಶಕ ಮುತ್ತೂರು ಚಂದ್ರೇಗೌಡ ಕೂಡ ಇದೇ ಆತಂಕ ಹಂಚಿಕೊಂಡು, “ಸಾಲ ಮರುಪಾವತಿಸಿದರೂ ಹೊಸ ಸಾಲ ನೀಡದೆ ಬ್ಯಾಂಕ್ ರೈತರನ್ನು ಕಂಗಾಲಾಗಿಸಿದೆ. ಪರಿಹಾರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಠೇವಣಿ ಇಟ್ಟ ಸದಸ್ಯರು, ಉತ್ತಮ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದನಾ ಸಂಘಗಳ ಪ್ರತಿನಿಧಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೆ.ಗುಡಿಯಪ್ಪ, ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ, ಮೇಲೂರು ಮುರಳಿ ಸೇರಿದಂತೆ ಅನೇಕರು ಭಾಗವಹಿಸಿದರು.
For Daily Updates WhatsApp ‘HI’ to 7406303366









