Dibburahalli, Sidlaghatta : ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರದ ಡಿಸೈನ್ ನೋಡಿಕೊಡುವುದಾಗಿ ಹೇಳಿ, ಚಿನ್ನದ ಸರ ಕದ್ದೊಯ್ದ ಪ್ರಕರಣ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಸಾದಲಿಯ ವಾಸಿ ಮರೆಮ್ಮ(70)ರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ.
ತಾಲ್ಲೂಕಿನ ಸಾದಲಿ ಗ್ರಾಮದ ವಾಸಿ ಮರೆಮ್ಮ ತನ್ನ ಮಗನಿಗೆ ಸೇರಿದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಅಂಗಡಿಯಲ್ಲಿ ಮಗನನ್ನು ಊಟಕ್ಕೆಂದು ಕಳುಹಿಸಿ ಕ್ಯಾಷ್ ಟೇಬಲ್ ನಲ್ಲಿ ತಾನು ಕುಳಿತಿದ್ದಾಗ ಬಂದ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ.
ವ್ಯಾಪಾರ ಮಾಡುವ ಸೋಗಿನಲ್ಲಿ ಬಂದ ಇಬ್ಬರು ಆಗುಂತಕರು, ನಿನ್ನ ಕತ್ತಿನಲ್ಲಿರುವ ಚಿನ್ನದ ಸರದ ಡಿಸೈನ್ ಚನ್ನಾಗಿದೆ. ನಮ್ಮ ಹುಡುಗನಿಗೆ ಇದೇ ತರ ಡಿಸೈನ್ ನ ಚಿನ್ನದ ಸರ ಆರ್ಡರ್ ಕೊಟ್ಟು ಮಾಡಿಸಬೇಕು. ಹಾಗಾಗಿ ಚಿನ್ನದ ಸರವನ್ನು ಕೊಡು ನೋಡಿಕೊಡುತ್ತೇನೆ ಎಂದಿದ್ದಾರೆ.
ಚಿನ್ನದ ಸರವನ್ನು ಕೊಡಲು ಮರೆಮ್ಮ ಒಪ್ಪಿಲ್ಲವಾದರೂ ಎಲ್ಲಿಗೂ ಎತ್ತಿಕೊಂಡು ಹೋಗುವುದಿಲ್ಲ. ಇಲ್ಲಿಯೇ ನೋಡಿಕೊಂಡು ಕೊಟ್ಟು ಬಿಡುತ್ತೇನೆ ಎಂದು ಪಟ್ಟು ಹಿಡಿದು ನಂಬಿಸಿ ಚಿನ್ನದ ಸರವನ್ನು ಪಡೆದುಕೊಂಡಿದ್ದಾನೆ. ಕೆಲ ಸಮಯದ ನಂತರ ಅಜ್ಜಿ ಸರವನ್ನು ಇಲ್ಲಿಟ್ಟಿದ್ದೇನೆ ನೋಡು ಎಂದು ಹೇಳಿ ಅಲ್ಲಿಂದ ಅವರಿಬ್ಬರೂ ಹೊರಟು ಹೋಗಿದ್ದಾರೆ.
ಆದರೆ ಅಲ್ಲಿ ಚಿನ್ನದ ಸರ ಇಲ್ಲ. ನಂತರ ಅಂಗಡಿಗೆ ಬಂದ ತನ್ನ ಮಗನಿಗೆ ನಡೆದ ಘಟನೆಯನ್ನು ವಿವರಿಸಿದ್ದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅಂಗಡಿಯಲ್ಲಿ ಸಿಸಿ ಕ್ಯಾಮರಾಗಳಿವೆ. ನಡೆದ ಎಲ್ಲ ಘಟನೆಯೂ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.








