Sidlaghatta : ಚಿಂತಾಮಣಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ಶಿಡ್ಲಘಟ್ಟದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ವಿವಿಧ ವೈಯಕ್ತಿಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಇವರಲ್ಲಿ ಹಲವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿ ನಯನ 400 ಮೀಟರ್ ಓಟ ಹಾಗೂ ಕರಾಟೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕುಮಾರಿ ರಿಹಾನ ಕರಾಟೆ ಮತ್ತು ಜೂಡೋ ಸ್ಪರ್ಧೆಗಳಲ್ಲಿ ಸ್ಥಾನ ಗಳಿಸಿ ರಾಜ್ಯಮಟ್ಟ ಪ್ರವೇಶ ಪಡೆದಿದ್ದಾಳೆ. ವಿಷ್ಣು ಸ್ಕಂದ ಬಾಲಕರ ಬಾಕ್ಸಿಂಗ್‌ನಲ್ಲಿ ಮತ್ತು ಮೊಹಮ್ಮದ್ ಅವೆಝ್ 80 ಕೆ.ಜಿ. ವಿಭಾಗದ ಪವರ್ ಲಿಪ್ಟಿಂಗ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ ಎಂದು ಕಾಲೇಜಿನ ಕ್ರೀಡಾ ತರಬೇತುದಾರ ಸಂಪತ್ ಕುಮಾರ್ ತಿಳಿಸಿದ್ದಾರೆ.
ಡಾಲ್ಫಿನ್ಸ್ ವಿಧ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ಅಶೋಕ್, ಆಡಳಿತಾಧಿಕಾರಿ ಚಂದನಾ ಅಶೋಕ್ ಹಾಗೂ ಪ್ರಾಂಶುಪಾಲ ಡಾ. ಎನ್. ಶ್ರೀನಿವಾಸಮೂರ್ತಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ರಾಜ್ಯಮಟ್ಟದಲ್ಲಿಯೂ ಉನ್ನತ ಸಾಧನೆ ಮಾಡುವಂತೆ ಹಾರೈಸಿದ್ದಾರೆ.