Sidlaghatta : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನಲ್ಲಿ ನಿವೇಶನ ಮತ್ತು ಮನೆ ಇಲ್ಲದ ದಲಿತ ಕುಟುಂಬಗಳ ಅಂಕಿ ಸಂಖ್ಯೆಗಳನ್ನು ಸಮೀಕ್ಷೆ ಮೂಲಕ ಕಲೆ ಹಾಕಲಾಗಿದೆ. ಅಂತಹ ಎಲ್ಲರಿಗೂ ಸರ್ಕಾರವೇ ಜಮೀನು ಗುರ್ತಿಸಿ ನಿವೇಶನಗಳನ್ನು ನೀಡಬೇಕು ಮತ್ತು ವಸತಿ ಯೋಜನೆಯಡಿ ಮನೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಬಗರ್ ಹುಕುಂ ಸಮಿತಿಯನ್ನು ಕೂಡಲೆ ರಚಿಸಬೇಕು. ನಮೂನೆ 50, 51, 53 ಮತ್ತು 57 ರ ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ಜಮೀನನ್ನು ಮಂಜೂರು ಮಾಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯು ಅರಣ್ಯದಂಚಿನ ರೈತರಿಗೆ ವಿನಾಕಾರಣ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳನ್ನು ಸರಿಪಡಿಸಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತರು ಮೃತಪಟ್ಟರೆ ಶವ ಸಂಸ್ಕಾರ ಮಾಡಲು ಸ್ಮಶಾನ ಇಲ್ಲ. ಸ್ಮಶಾನ ಇದ್ದರೂ ಅದಕ್ಕೆ ಹೋಗಲು ದಾರಿಯಿಲ್ಲ. ಕೂಡಲೆ ಸ್ಮಶಾನ ಇಲ್ಲದ ಕಡೆ ಸ್ಮಶಾನ ನೀಡಬೇಕು, ದಾರಿ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.
ತಾಲ್ಲೂಕಿನಲ್ಲಿನ ಎಲ್ಲ ದಲಿತ ಕಾಲೋನಿಗಳಲ್ಲಿನ ದಲಿತರ ಮನೆಗಳಿಗೆ ನಿವೇಶನಗಳಿಗೆ ಇ ಖಾತೆಯನ್ನು ನೀಡಬೇಕು. ತಾತಹಳ್ಳಿ ಸೇರಿದಂತೆ ತಾಲ್ಲೂಕಿನಲ್ಲಿ ಅನೇಕ ಗ್ರಾಮಗಳಿಗೆ ಸೂಕ್ತ ರಸ್ತೆಯನ್ನು ಅಭಿವೃದ್ದಿ ಪಡಿಸಿ ಡಾಂಬರು ಮಾಡಬೇಕು ಎಂದು ಮನವಿ ಮಾಡಿದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ವರದಿಯಂತೆ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು ಮತ್ತು ಗಾಂಡ್ಲಚಿಂತೆ ಗ್ರಾಮದ ಸರ್ಕಾರಿ ಶಾಲೆಯ ಆಟದ ಮೈದಾನವನ್ನ ಒತ್ತುವರಿ ಮಾಡಿಕೊಂಡಿದ್ದು ಒತ್ತುವರಿ ತೆರವುಗೊಳಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಗಗನಸಿಂಧು ಅವರಿಗೆ ಮನವಿ ಸಲ್ಲಿಸಿದರು.