Sidlaghatta, chikkaballapur : ರಾಷ್ಟ್ರದ ಲೋಹಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ಶಿಡ್ಲಘಟ್ಟ ನಗರದಲ್ಲಿ ರಾಷ್ಟ್ರೀಯ ಏಕತಾ ದಿವಸವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.
ತಾಲ್ಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‘ಏಕತಾ ಓಟ’ (Run for Unity) ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ಎನ್. ಗಗನ ಸಿಂಧು ಮಾತನಾಡಿ, “ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮತ್ತು ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 550ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತ ರಾಷ್ಟ್ರದ ಭಾಗವನ್ನಾಗಿ ಮಾಡಿದ ಮಹಾನ್ ನಾಯಕರಾಗಿದ್ದರು. ಅವರ ಕಾರ್ಯದಿಂದಲೇ ಭಾರತದ ಏಕತೆ ಮತ್ತು ಸಮಗ್ರತೆಗೆ ಬುನಾದಿ ಬಿದ್ದಿತು,” ಎಂದು ಹೇಳಿದರು.
ಅವರು ಮುಂದುವರಿಸಿ, “ಈ ಓಟದ ಉದ್ದೇಶ ಜನರಲ್ಲಿ ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡುವ ಸಂಕಲ್ಪವನ್ನು ಮೂಡಿಸುವುದು. ಯುವಕರು ಸರ್ದಾರ್ ಪಟೇಲ್ ಅವರ ನಿಷ್ಠೆ, ಶಿಸ್ತು ಮತ್ತು ದೇಶಪ್ರೇಮದಿಂದ ಸ್ಫೂರ್ತಿ ಪಡೆಯಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್, ಪಿ.ಎಸ್.ಐ ವೇಣುಗೋಪಾಲ್, ನಗರಸಭೆ ಪೌರಾಯುಕ್ತೆ ಜಿ. ಅಮೃತ, ಪೊಲೀಸ್ ಸಿಬ್ಬಂದಿ, ಕ್ರೀಡಾಪಟುಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು.
For Daily Updates WhatsApp ‘HI’ to 7406303366




 
                                    




