Appegowdanahalli, Sidlaghatta, chikkaballapur : ಪಂಜಾಬ್, ಹರಿಯಾಣಾ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಾಮಾನ್ಯವಾಗಿ ಬೆಳೆಯುವ ಬಿಳಿ ಸಾಸಿವೆ (White Mustard) ಈಗ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ರೋಹಿತ್ ಅವರ ಹೊಲದಲ್ಲೂ ಬೆಳೆಯಲ್ಪಟ್ಟು, ಉತ್ತಮ ಫಲಿತಾಂಶ ನೀಡಿದೆ. ಇದು ಈ ಪ್ರದೇಶದಲ್ಲಿ ಅಪರೂಪದ ಪ್ರಯತ್ನವಾಗಿದ್ದು, ಸ್ಥಳೀಯ ರೈತರಲ್ಲಿ ಕುತೂಹಲ ಮೂಡಿಸಿದೆ.
ರೋಹಿತ್ ಅವರು ಹೇಳಿದರು — “ನನ್ನ ಸ್ನೇಹಿತರಿಂದ ಸ್ವಲ್ಪ ಬಿಳಿ ಸಾಸಿವೆ ಬೀಜಗಳು ದೊರಕಿದವು. ಪ್ರಯೋಗಾತ್ಮಕವಾಗಿ ಐದು ಗುಂಟೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದೆ. ಕುರಿ ಗೊಬ್ಬರ ಮಾತ್ರ ಬಳಸಿದ್ದೆ. ಈಗ ಉತ್ತಮ ಫಸಲು ದೊರೆತಿದೆ. ಮುಂದಿನ ಬಾರಿ ಈ ಬೆಳೆ ಹೆಚ್ಚುವರಿಯಾಗಿ ಬೆಳೆಸುವ ಉದ್ದೇಶವಿದೆ. ಅಡಿಗೆ ಮಾತ್ರವಲ್ಲ, ಪೂಜಾ ಹೋಮ ಹವನಗಳಲ್ಲಿ, ಆಯುರ್ವೇದದಲ್ಲೂ ಇದರ ಬಳಕೆ ಇದೆ. ಬೇಡಿಕೆ ಇದೆ ಎಂದರೆ ಖಂಡಿತವಾಗಿಯೂ ಇದು ಉತ್ತಮ ಬೆಳೆಯಾಗಿದೆ” ಎಂದು ತಿಳಿಸಿದ್ದಾರೆ.
ಬಿಳಿ ಸಾಸಿವೆ, ವೈಜ್ಞಾನಿಕವಾಗಿ “ಬ್ರಾಸಿಕಾ ಆಲ್ಬಾ” (Brassica alba) ಎಂದೇ ಕರೆಯಲ್ಪಡುತ್ತದೆ. ಹಳದಿ ಬಣ್ಣದ ಶಿಲುಬೆಯಾಕಾರದ ಹೂಗಳು ಮತ್ತು ಬೀಜಗಳಿಂದ ಕೂಡಿರುವ ಈ ಸಸ್ಯವು ಆರೋಗ್ಯ ಪ್ರಯೋಜನಗಳಿಗಾಗಿ, ಆಯುರ್ವೇದ ಮತ್ತು ಧಾರ್ಮಿಕ ಉದ್ದೇಶಗಳಿಗೂ ಬಳಸಲಾಗುತ್ತದೆ.
ಈ ಸಸ್ಯವು ಮಣ್ಣಿನ ಗುಣಮಟ್ಟ ಸುಧಾರಣೆಗೂ ಸಹಕಾರಿ — ಸಾವಯವ ಪದಾರ್ಥಗಳನ್ನು ಸೇರಿಸಿ ಮಣ್ಣು ಸಮೃದ್ಧಗೊಳಿಸುವ ಗುಣವನ್ನು ಹೊಂದಿದೆ. ವಾಸ್ತುಶಾಸ್ತ್ರದ ಪ್ರಕಾರ ಮನೆ ಕಟ್ಟುವಾಗ ಬಿಳಿ ಸಾಸಿವೆಯ ಬಳಕೆ ಶುದ್ಧೀಕರಣ ಮತ್ತು ರಕ್ಷಣೆಗೆ ಉಪಯುಕ್ತವೆಂದು ನಂಬಿಕೆ ಇದೆ.







