Sidlaghatta : ಕೋಳಿ ಸಾಕಾಣಿಕೆಯನ್ನು ಕೃಷಿಯೆಂದು ಪರಿಗಣಿಸಿ ಕುಕ್ಕುಟ ಉದ್ಯಮದ ಸಮರ್ಪಕ ನಿರ್ವಹಣೆಗೆ ನೂತನ ಕಾನೂನು ರೂಪಿಸುವ ಜೊತೆಗೆ ಸಹಕಾರಿ ಕ್ಷೇತ್ರವನ್ನಾಗಿ ಮಾಡಬೇಕು ಎಂದು ರಾಜ್ಯ ಕೋಳಿ ಸಾಕಾಣಿಕೆದಾರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಮಳಮಾಚನಹಳ್ಳಿ ಮುನೇಗೌಡ ಒತ್ತಾಯಿಸಿದರು.
ತಾಲ್ಲೂಕು ತಹಶೀಲ್ದಾರ್ ಗಗನಸಿಂಧು ಅವರ ಮುಖಾಂತರ ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿದರು.
ಕೋಳಿ ಸಾಕಾಣಿಕೆಯನ್ನು ಕೃಷಿಯೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವಾದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕೋಳಿ ಸಾಕಾಣಿಕೆದಾರರಿಗೆ ಸರ್ಕಾರದಿಂದ ಯಾವುದೇ ರೀತಿಯಾದಂತಹ ಸವಲತ್ತುಗಳು ದೊರಕುತ್ತಿಲ್ಲ.
ಕೋಳಿ ಸಾಕಾಣಿಕೆದಾರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಕೃಷಿಗೆ ಸಿಗುವಂತಹ ಹಲವು ಸೌಲಭ್ಯಗಳು ಕೋಳಿ ಸಾಕಾಣಿಕೆದಾರರಿಗೆ ಸಿಗಬೇಕು. ರೈತರಿಗೆ ಕೋಳಿ ಸಾಕಣಿಕೆ ದರ ಪ್ರತಿ ಕೆಜಿಗೆ ಕನಿಷ್ಠ ದರ 12 ರೂಪಾಯಿಗಳನ್ನು ನಿಗಧಿ ಮಾಡಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕು ಉಪಾಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ನಮ್ಮ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶನದಂತೆ ರಾಜ್ಯದ್ಯಂತ ಪ್ರತಿ ತಾಲ್ಲೂಕಿನಲ್ಲಿಯೂ ತಹಶೀಲ್ದಾರ್ ಮುಕೇನ ರಾಜ್ಯ ಸರ್ಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸುತ್ತಿದ್ದು, ರಾಜ್ಯದ ಮುಖ್ಯಮಂತ್ರಿಗಳು ಕೋಳಿ ಸಾಕಾಣಿಕೆದಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಕಾರ್ಯದರ್ಶಿ ಬಿ.ಪಿ.ಶಿವಾಜಿ, ಕೋಳಿ ಸಾಕಾಣಿಕೆದಾರರಾದ ಕೋಟಹಳ್ಳಿ ಶ್ರೀನಿವಾಸ್, ಬೋದಗೂರು ನಾಗೇಶ್, ಬಶೆಟ್ಟಹಳ್ಳಿ ಡಿ.ಬಿ.ವೆಂಕಟೇಶ್, ಮುತ್ತೂರು ಜಯಚಂದ್ರ, ತಾದೂರು ಮಹೇಶ್, ಬಸವಾಪಟ್ಟಣ ಬೈರೇಗೌಡ, ಮಂಜುನಾಥ್ ಹಾಜರಿದ್ದರು.