Sidlaghatta : ಸಾಂಪ್ರದಾಯಿಕ ಪದ್ಧತಿಗಿಂತಲೂ ಕೂರಿಗೆ ಅಥವಾ ಗುಣಿ ಪದ್ಧತಿಯಲ್ಲಿ ರಾಗಿ (Finger Millet) ಬೆಳೆಯುವುದರಿಂದ ಹೆಚ್ಚು ಇಳುವರಿ ಪಡೆಯಬಹುದು ಎಂದು ಕೃಷಿ ಸಹಾಯಕ ನಿರ್ದೇಶಕ ಪಿ. ರವಿ ಅವರು ತಿಳಿಸಿದರು. ತಾಲ್ಲೂಕಿನ ಬೂದಾಳ ಗ್ರಾಮದ ರೈತ ರಾಮಾಂಜಿನಪ್ಪ ಅವರ ಗುಣಿ ಪದ್ಧತಿಯಲ್ಲಿ ಬೆಳೆದ ರಾಗಿ ಹೊಲದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ (Field Day) ಅವರು ಈ ವಿಷಯ ತಿಳಿಸಿ, ಗುಣಿ ಪದ್ಧತಿಯಿಂದ ಆಗುವ ಉಪಯೋಗಗಳ ಬಗ್ಗೆ ರೈತರಿಗೆ ವಿವರಿಸಿದರು. ಕಡಿಮೆ ಪ್ರಮಾಣದ ಮಳೆ ಬಿದ್ದರೂ ಸಾಕು ರಾಗಿ ಬೆಳೆ ಫಸಲು ಸಿಗುತ್ತದೆ ಎಂದು ತಿಳಿಸಿದ ಅವರು, ಮುಂಗಾರು ಮಳೆ ಮತ್ತು ನೀರಾವರಿ ಆಶ್ರಯದಲ್ಲೂ ರಾಗಿ ಬೆಳೆ ಬೆಳೆಯಬಹುದು ಮತ್ತು ಸಾಮಾನ್ಯ ಪದ್ಧತಿಗಿಂತಲೂ ಗುಣಿ ಪದ್ಧತಿಯಲ್ಲಿ ಬೆಳೆಯುವುದರಿಂದ ಹೆಚ್ಚು ಫಸಲು ಸಿಗಲಿದೆ ಎಂದು ಒತ್ತಿ ಹೇಳಿದರು.
ಸಾಮಾನ್ಯವಾಗಿ ರಾಗಿ ಬೆಳೆಗೆ ಹೆಚ್ಚು ಬಂಡವಾಳ ಹಾಕುವ ಅಥವಾ ಔಷಧ ಸಿಂಪಡಣೆ ಮಾಡುವ ಅಗತ್ಯವಿಲ್ಲ. ಮುಂಗಾರು ಮಳೆಗಾಲದಲ್ಲಿ ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಿ ಜೂನ್-ಜುಲೈನಿಂದ ಆಗಸ್ಟ್ ಎರಡನೇ ವಾರದವರೆಗೂ ರಾಗಿ ಬಿತ್ತನೆ ಮಾಡಬಹುದು. ನೀರಿನ ಅನುಕೂಲ ಇದ್ದವರು ವರ್ಷದ ಯಾವ ಸಮಯದಲ್ಲಾದರೂ ರಾಗಿ ಬಿತ್ತನೆ ಮಾಡಬಹುದಾದರೂ, ಜಡಿ ಮಳೆಗೆ ಫಸಲು ಸಿಗದಂತೆ ಹವಾಮಾನ ನೋಡಿಕೊಂಡು ಉಳುಮೆ ಮಾಡಬಹುದು. ರಾಗಿ ಕೇವಲ ಮೂರು ತಿಂಗಳ ಬೆಳೆಯಾಗಿದ್ದು, ಉತ್ತಮ ಫಸಲು ಸಿಗಲಿದೆ. ರೈತರು ಕೃಷಿ ಕುರಿತಾಗಿ ಸಾಕಷ್ಟು ಜ್ಞಾನ ಹೊಂದಿದ್ದರೂ, ಇಲಾಖೆಯ ತಜ್ಞರು, ಹಿರಿಯ ಅಧಿಕಾರಿಗಳ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಪಡೆದು, ಹವಾಮಾನ ಹಾಗೂ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವುದು ಸೂಕ್ತ. ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವುದು ಒಳ್ಳೆಯದು ಎಂದು ಕೃಷಿ ಸಹಾಯಕ ನಿರ್ದೇಶಕರು ಸಲಹೆ ನೀಡಿದರು.
ರೈತ ಬೂದಾಳ ರಾಮಾಂಜಿನಪ್ಪ ಅವರು ಮಾತನಾಡಿ, ತಾವು ಗುಣಿ ಪದ್ಧತಿಯಲ್ಲಿ ಹಲವು ವರ್ಷಗಳಿಂದಲೂ ರಾಗಿ ಬೆಳೆ ಬೆಳೆಯುತ್ತಿದ್ದು, ಸಾಮಾನ್ಯ ಪದ್ಧತಿಗಿಂತಲೂ ಈ ಪದ್ಧತಿಯಿಂದ ಹೆಚ್ಚು ಪ್ರಮಾಣದಲ್ಲಿ ಇಳುವರಿ ಪಡೆಯುತ್ತಿರುವುದಾಗಿ ವಿವರಿಸಿದರು. ಗುಣಿ ಪದ್ಧತಿಯಲ್ಲಿ ರಾಗಿ ಬಿತ್ತನೆ ಮಾಡಲು ಕೈಗೊಳ್ಳಬೇಕಾದ ತಯಾರಿ, ಕ್ರಮಗಳ ಬಗ್ಗೆ ತಮ್ಮ ಅನುಭವವನ್ನು ರೈತರಿಗೆ ತಿಳಿಸಿಕೊಟ್ಟರು. ಈ ವೇಳೆ ಬೂದಾಳ ರಾಮಾಂಜಿನಪ್ಪ ಅವರು ಬೆಳೆದಿದ್ದ ಗುಣಿ ಪದ್ಧತಿಯ ರಾಗಿ ಬೆಳೆಯನ್ನು ಎಲ್ಲಾ ರೈತರು ಮತ್ತು ಅಧಿಕಾರಿಗಳು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಸುನಿಲ್, ಆತ್ಮ ಯೋಜನೆಯ ಅಂಬರೀಷ್, ತಾಂತ್ರಿಕ ಅಧಿಕಾರಿ ರಾಧಕೃಷ್ಣ, ದೇವರಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರದೇವರಾಜ್, ಕೃಷಿ ಪಂಡಿತ ಪುರಸ್ಕೃತ ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಮಳ್ಳೂರು ಗೋಪಾಲ, ರಾಮಮೂರ್ತಿ, ವೀರಾಪುರ ಮುನಿರೆಡ್ಡಿ, ರಾಮಣ್ಣ, ನಂದಿನಿ, ರಾಚಹಳ್ಳಿ ಶೈಲಜ ಮತ್ತು ತುಳಸಮ್ಮ ಹಾಜರಿದ್ದರು.








