Sidlaghatta : ಶಿಡ್ಲಘಟ್ಟದಲ್ಲಿ ಗುರುವಾರ ಗಾಂಧಿ ಜಯಂತಿ ಪ್ರಯುಕ್ತ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಅಭಿಯಾನದಲ್ಲಿ ತಹಶೀಲ್ದಾರ್ ಗಗನಸಿಂಧು, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ನಗರಸಭೆ ಪೌರಾಯುಕ್ತೆ ಜಿ. ಅಮೃತ, ನಗರಸಭಾ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡರು.
ತಹಶೀಲ್ದಾರ್ ಗಗನಸಿಂಧು ಅವರು ಮಾತನಾಡಿ, “ಮನೆಯ ಸ್ವಚ್ಛತೆಯಂತೆ ಬೀದಿ ಮತ್ತು ಊರನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿಧಿಸಲಾಗುವುದು” ಎಂದು ಎಚ್ಚರಿಸಿದರು.
ಪೌರಾಯುಕ್ತೆ ಜಿ. ಅಮೃತ ಅವರು, “ಅಂಗಡಿ ಮಾಲೀಕರು ನಗರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ಕಸ ಹಸ್ತಾಂತರಿಸಬೇಕು. ರಸ್ತೆಗಳಲ್ಲಿ ಕಸ ಸುರಿಸಿದರೆ ದಂಡ ವಿಧಿಸಲಾಗುವುದು. ಪ್ಲಾಸ್ಟಿಕ್ ಬಳಕೆಯನ್ನು ತಕ್ಷಣ ನಿಲ್ಲಿಸಬೇಕು. ಸ್ವಚ್ಛ ಶಿಡ್ಲಘಟ್ಟ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ” ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಅವರು, “ಮಹಾತ್ಮ ಗಾಂಧೀಜಿ ಅವರ ಸ್ವಚ್ಛತೆಯ ಸಂದೇಶವನ್ನು ಜನರಲ್ಲಿ ಹರಡುವುದೇ ಈ ಅಭಿಯಾನದ ಉದ್ದೇಶ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯುವುದರ ಮೂಲಕ ರೋಗ ನಿಯಂತ್ರಣ ಸಾಧ್ಯ. ಊರು ಮತ್ತು ಪರಿಸರದ ಬಗ್ಗೆ ಅಭಿಮಾನ ಬೆಳೆಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು” ಎಂದು ಕರೆ ನೀಡಿದರು.