Sidlaghatta : ಶಿಡ್ಲಘಟ್ಟ ನಗರದ ಸಿದ್ಧಾರ್ಥನಗರದಲ್ಲಿ ಗಂಗಮ್ಮದೇವಿಯ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ತಲೆ ಮೇಲೆ ತಂಬಿಟ್ಟು ದೀಪ ಹೊತ್ತು ಊರ ಪ್ರದಕ್ಷಿಣೆ ನಡೆಸಿ ಗ್ರಾಮ ದೇವತೆಗಳಾದ ಶ್ರೀ ಗಂಗಮ್ಮದೇವಿ, ಶ್ರೀಪೂಜಮ್ಮ ದೇವಿ, ಶ್ರೀ ಎಲ್ಲಮ್ಮದೇವಿ, ಶ್ರೀನಾಗಲಮುದ್ದಮ್ಮ ದೇವಿ ಹಾಗೂ ಕೋಟೆ ಶ್ರೀಸೋಮೇಶ್ವರ ಸ್ವಾಮಿ ಹಾಗೂ ಊರ ಕೆರೆ ದೇವರು ಮುನೇಶ್ವರ ಸ್ವಾಮಿಗೆ ತಂಬಿಟ್ಟು ದೀಪದಾರತಿ ಬೆಳಗಿದರು.
ಜಾತ್ರೆಯ ಪ್ರಯುಕ್ತ ಸಿದ್ದಾರ್ಥ ನಗರದ ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ತೋರಣ, ಗ್ರಾಮದ ಪ್ರಮುಖ ರಸ್ತೆಗಳು ನವವಧುವಿನಂತೆ ಶೃಂಗಾರಗೊಂಡಿದ್ದವು. ಸಿದ್ದಾರ್ಥನಗರ,ನಗರ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ನಗರದ ಸಿದ್ದಾರ್ಥ ನಗರದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವವನ್ನು ಬಹಳ ಅದ್ದೂರಿಯಿಂದ ನೆರವೇರಿಸಲಾಯಿತು. ಎಂದಿನಂತೆ ಈ ಬಾರಿಯೂ ಸಹ ಕುರಿ, ಮೇಕೆ, ಕೋಳಿ ಬಲಿ ನೀಡಿ ಸಕಾಲದಲ್ಲಿ ಮಳೆ ಬೆಳೆ ಆಗಲಿ, ಜನತೆ ಆರೋಗ್ಯದಿಂದ ಇರಲಿ ಎಂದು ಪ್ರಾರ್ಥಿಸಿದರು.