Sidlaghatta : ಶಿಡ್ಲಘಟ್ಟ ತಾಲ್ಲೂಕಿನ ರೈತರು ಬೆಳೆದ ಜಂಬುನೇರಳೆ ಹಣ್ಣು ಮೊಟ್ಟಮೊದಲ ಬಾರಿಗೆ ವಿದೇಶಕ್ಕೆ ಹಾರಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಜಂಬುನೇರಳೆ ಹಣ್ಣಿಗೆ ಬೇಡಿಕೆ ಮತ್ತು ಬೆಲೆ ಸಿಗುವ ಆಶಾಭಾವನೆ ರೈತರಲ್ಲಿ ಮೂಡಿದೆ.
ತಾಲ್ಲೂಕಿನ ಕನ್ನಮಂಗಲದ ರೈತ ಕೆ.ಎನ್.ಮಾರೇಶ್ ಅವರು ಬೆಳೆದಿರುವ ಒಂದು ಟನ್ ಜಂಬುನೇರಳೆ ಹಣ್ಣು ಈ ಬಾರಿ ಲಂಡನ್ನಿಗೆ ರಫ್ತಾಗಿದೆ. ಇದಕ್ಕೆ ಮೂಲ ಕಾರಣ ಚಿಂತಾಮಣಿಯ ಮ್ಯಾಂಗೋ ಬೋರ್ಡ್ ನ ವ್ಯವಸ್ಥಾಪಕ ಹರಿಪ್ರಸಾದ್.
“ನಮ್ಮದು ಎರಡೂವರೆ ಎಕರೆ ತೋಟದಲ್ಲಿ ಒಂದು ನೂರು ಜಂಬುನೇರಳೆ ಮರಗಳಿವೆ. ಸುಮಾರು ಎಂಟು ವರ್ಷಗಳಿಂದ ಫಸಲು ಕೊಡುತ್ತಿವೆ. ಹಣ್ಣು ಬಿಟ್ಟಾಗ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದು, ಸಿಕ್ಕ ಬೆಲೆಗೆ ಮಾರಿ ಬರುವುದು ನಮಗೆ ರೂಢಿ. ಕೆಲ ಬಾರಿ ಹೆಚ್ಚಿನ ಹಣ್ಣುಗಳು ಆವಕವಾದಾಗ ಕೊಳ್ಳುವವರಿಲ್ಲದೆ ಬಿಸಾಡಿ ಬಂದದ್ದೂ ಇದೆ. ಇದೀಗ ಮ್ಯಾಂಗೋ ಬೋರ್ಡ್ ನ ವ್ಯವಸ್ಥಾಪಕ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಜಂಬುನೇರಳೆ ಹಣ್ಣಿಗೆ ವಿದೇಶಕ್ಕೆ ರಫ್ತಾಗುವ ಅವಕಾಶ ಲಭಿಸಿದೆ. ಮುಂದೆ ಒಳ್ಳೆಯ ದಿನಗಳು ಬರುತ್ತದೆ ಎಂಬ ನಂಬಿಕೆ ಬಂದಿದೆ” ಎಂದು ರೈತ ಕೆ.ಎನ್.ಮಾರೇಶ್ ತಿಳಿಸಿದರು.
“ನಾನು ಮ್ಯಾಂಗೋ ಬೋರ್ಡ್ ನಲ್ಲಿ ಕೆಲಸ ಮಾಡುತ್ತೇನೆ. ಅಲ್ಲಿ ಮಾವಿನ ಹಣ್ಣನ್ನು ವಿದೇಶಕ್ಕೆ ರಫ್ತು ಮಾಡುವ ಮುನ್ನ ಪ್ಯಾಕಿಂಗ್ ಮಾಡುವ ಎರಡು ಘಟಕಗಳಿವೆ. ಅಲ್ಲಿಗೆ ಬರುವ ರಫ್ತುದಾರರೊಂದಿಗೆ ಒಡನಾಟವಿರುವ ನಮ್ಮ ವ್ಯವಸ್ಥಾಪಕರು, ನೇರಳೆಹಣ್ಣನ್ನು ಸಹ ರಫ್ತುದಾರರು ಕೇಳುತ್ತಿದ್ದಾರೆ, ಗುಣಮಟ್ಟದ್ದು ಇದ್ದರೆ ತಂದು ಕೊಡು ಎಂದು ನನಗೆ ತಿಳಿಸಿದರು. ಅದರಂತೆ ನಮ್ಮ ತೋಟದ ಜಂಬುನೇರಳೆ ಹಣ್ಣನ್ನು ಕೊಟ್ಟೆ” ಎಂದು ಅವರು ವಿವರಿಸಿದರು.