Home News ಭಿನ್ನತೆಗಳಿಗೆ ತೆರೆ ಹಾಡಿ ಸೌಹಾರ್ದಯುತವಾಗಿ ಬಾಳಬೇಕು

ಭಿನ್ನತೆಗಳಿಗೆ ತೆರೆ ಹಾಡಿ ಸೌಹಾರ್ದಯುತವಾಗಿ ಬಾಳಬೇಕು

0
Sidlaghatta Harmony BEO Education

ವೈವಿಧ್ಯವಾದ ಭಾಷೆ, ವೇಷ, ಆಹಾರ, ಸಂಸ್ಕೃತಿವುಳ್ಳ ಭಾರತದಲ್ಲಿ ಸೌಹಾರ್ದತೆ ಏಕತೆಗೆ ಮನ್ನಣೆ ನೀಡಲಾಗಿದೆ. ಇದರಿಂದಾಗಿ ನಮ್ಮ ದೇಶ ಜಗತ್ತಿನಲ್ಲಿಯೇ ವಿಶಿಷ್ಟವೆನಿಸಿದ್ದು, ಸುಸಂಸ್ಕೃತಿಗೆ ಹೆಸರಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ತಿಳಿಸಿದರು. 

 ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ನಗರದ ಬಿ.ಆರ್.ಸಿ ಕೇಂದ್ರದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ “ಭಾಷಾ ಸೌಹಾರ್ದತಾ ದಿನ” ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ರಾಷ್ಟ್ತ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು, ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಐಕ್ಯತಾ ಸಪ್ತಾಹ ಆಚರಣೆ ಮೂಲಕ ನಮ್ಮೊಳಗಿನ ಭಿನ್ನತೆಗಳಿಗೆ ತೆರೆ ಹಾಡಿ ಸೌಹಾರ್ದ ಭಾರತದ ಕನಸನ್ನು ಮಾದರಿಯಾಗಿಸಬೇಕಾಗಿದೆ. ನಮ್ಮ ದೇಶದ ಸಂಸ್ಕೃತಿಯೇ ಸೌಹಾರ್ದಕ್ಕೆ ಹೆಸರಾದುದು. ಅದರಲ್ಲೂ ಕನ್ನಡಿಗರೂ ಇಡೀ ದೇಶದಲ್ಲಿಯೇ ಸೌಹಾರ್ದಕ್ಕೆ ಹೆಸರಾದವರು ಎಂದರು.

 ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ ಗೌಡ ಮಾತನಾಡಿ, ಕನ್ನಡದ ಪರಿಶುದ್ಧತೆಯೊಂದಿಗೆ ಅನ್ಯ ಭಾಷೆ ಕಲಿಯಲು ತೊಡಕಿಲ್ಲ. ಆದರೆ ನಮ್ಮ ಭಾಷೆ ಪ್ರೀತಿ ಇರಲಿ, ಪರಭಾಷೆಯ ದ್ವೇಷ ಬೇಡ. ಭಾಷೆ ಜಾತಿಯ ಹೆಸರಿನಲ್ಲಿ ವ್ಯಾಜ್ಯಗಳಾಗಿ ನೆಮ್ಮದಿ ಕದಡುವುದು ಬೇಡ ಎಂದು ಹೇಳಿದರು.

 ಮುಖ್ಯ ಭಾಷಣಕಾರ ಶಿಕ್ಷಕ ಕೆಂಪಣ್ಣ ಮಾತನಾಡಿ, ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಕಾಪಾಡಲು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸ ಬೇಕು. ಭಾರತ ಮಾತೆಯ ಸುಪುತ್ರರಾದ ನಾವು ಭೇದ ಭಾವ ಬಿಸಾಕಿ ಏಕತೆಯ ಡಿಂಡಿಮ ಬಾರಿಸಬೇಕು. ಐಕ್ಯತಾ ಸಪ್ತಾಹದ ನಿಮಿತ್ತ ಅಲ್ಪ ಸಂಖ್ಯಾತರ ಕಲ್ಯಾಣ ದಿನ, ಭಾಷಾ ಸೌಹಾರ್ದತಾ ದಿನ, ದುರ್ಬಲ ವರ್ಗಗಳ ದಿನ, ಸಾಂಸ್ಕೃತಿಕ ಏಕತಾ ದಿನ, ಮಹಿಳಾ ದಿನ, ಪರಿಸರ ರಕ್ಷಣಾ ದಿನಗಳ ಕುರಿತು ಚರ್ಚೆ ಸಂವಾದ ಏರ್ಪಡಿಸುವುದರ ಮೂಲಕ ಏಕತೆಯ ಬೆಸುಗೆಗೆ ಮುನ್ನುಡಿ ಬರೆಯಲಾಗುತ್ತಿದೆ ಎಂದರು.

 ವಕೀಲರಾದ ಲೋಕೇಶ್, ಸುಬ್ರಮಣ್ಯಪ್ಪ, ಆರ್.ವಿ.ವೀಣಾ, ರಾಮಕೃಷ್ಣ, ಶಿಕ್ಷಣ ಸಂಯೋಜಕರಾದ ಭಾಸ್ಕರ್ ಗೌಡ, ಪರಿಮಳ, ಕ್ಷೇತ್ರ ಸಮನ್ವಯಾಧಿಕಾರಿ ತ್ಯಾಗರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ವಿವಿಧ ಶಾಲೆಯ ಮುಖ್ಯ ಶಿಕ್ಷಕರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version