Sidlaghatta : ಸಾರ್ವಜನಿಕರಲ್ಲಿ ಆರೋಗ್ಯ ಸೇವೆಗಳು ಮತ್ತು ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಕುರಿತು ಅರಿವು ಮೂಡಿಸುವ ಸಲುವಾಗಿ ನಗರದ ಸರ್ಕಾರಿ ಬಸ್ ನಿಲ್ದಾಣ ಹಾಗೂ ನಗರಸಭೆ ಕಚೇರಿ ಮುಂಭಾಗದಲ್ಲಿ ಮಂಗಳವಾರ ಗ್ರಾಮೀಣ ಯುವ ಕಲಾ ಸಂಘ, ಗೊಟ್ಟಗುಂಟೆ ತಂಡದಿಂದ ಆಕರ್ಷಕ ಬೀದಿ ನಾಟಕ ಪ್ರದರ್ಶಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಜಾಗೃತಿ ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಆರೋಗ್ಯವೇ ಭಾಗ್ಯ. ಸುಖ-ಸಂತೋಷದ ಜೀವನಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಅಡಿಪಾಯವಾಗಿದೆ. ಉತ್ತಮ ಆಹಾರ, ನೈರ್ಮಲ್ಯ ಮತ್ತು ವ್ಯಾಯಾಮದ ಮೂಲಕ ರೋಗಗಳನ್ನು ದೂರವಿಡಬಹುದು. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಉಚಿತ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ತಿಳಿಸಿದರು.
ವಿನೂತನ ಶೈಲಿಯಲ್ಲಿ ಜಾಗೃತಿ: ಗೊಟ್ಲಗುಂಟೆ ವೆಂಕಟರೋಣಪ್ಪ ಅವರ ನೇತೃತ್ವದ ಕಲಾತಂಡವು ಬೀದಿ ನಾಟಕದ ಮೂಲಕ ಹಲವಾರು ಸಾಮಾಜಿಕ ಮತ್ತು ಆರೋಗ್ಯ ಸಂಬಂಧಿ ವಿಷಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟಿತು. ಪ್ರಮುಖವಾಗಿ:
- ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಪೌಷ್ಟಿಕಾಂಶದ ಮಹತ್ವ.
- ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆಯ ಬಗ್ಗೆ ಅರಿವು.
- ಸಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ತಡೆಗಟ್ಟುವಿಕೆ.
- ಕ್ಷಯ ರೋಗ (TB) ಮತ್ತು ತಂಬಾಕು ನಿಯಂತ್ರಣದ ಬಗ್ಗೆ ಎಚ್ಚರಿಕೆ.
- ಹದಿಹರೆಯದವರ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ.
ಗ್ರಾಮೀಣ ಯುವ ಕಲಾ ಸಂಘದ ಅಧ್ಯಕ್ಷ ಗೊಟ್ಲಗುಂಟೆ ವೆಂಕಟರೋಣಪ್ಪ ಮಾತನಾಡಿ, ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ರೋಗ ಲಕ್ಷಣಗಳು ಕಂಡ ತಕ್ಷಣ ನಿರ್ಲಕ್ಷಿಸದೆ ಸರ್ಕಾರದ ಯೋಜನೆಗಳ ಲಾಭ ಪಡೆದು ಆರೋಗ್ಯವಂತರಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸುನಿಲ್, ಕಲಾವಿದರಾದ ಶಮೀರ್ ಬಿ, ಬಾಲಕೃಷ್ಣ, ವೆಂಕಟಸ್ವಾಮಿ ಎನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.








