Idludu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಇದ್ಲೂಡು ಗ್ರಾಮದಲ್ಲಿ ಊರ ದೇವಿ ಹಾಗೂ ಸಪ್ಪಲಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಮೂರು ದಿನಗಳ ಕಾಲ ಗ್ರಾಮಸ್ಥರೆಲ್ಲರೂ ಸೇರಿ ಆಚರಿಸಿದರು.
ಜಾತ್ರೆಯ ಮೊದಲ ದಿನ ಸೋಮವಾರ ಊರ ನಡುವಿನ ಶ್ರೀಚನ್ನಕೇಶವಸ್ವಾಮಿ, ಶ್ರೀಕೃಷ್ಣಸ್ವಾಮಿ, ಶ್ರೀ ಅಭಯ ಆಂಜನೇಯಸ್ವಾಮಿ ಹಾಗೂ ಗ್ರಾಮ ದೇವತೆ ಶ್ರೀಗಂಗಮ್ಮ ದೇವಿಯ ಪ್ರತಿರೂಪ ಗೊಡ್ಡು ಕಲ್ಲಿಗೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಎರಡನೇ ದಿನ ಮಂಗಳವಾರ ಊರ ಹೊರಗಿನ ಕೆರೆಯಂಗಳದಲ್ಲಿ ಲಕ್ಕಲಿ ಸೊಪ್ಪು ಹೊಂಗೆ ಸೊಪ್ಪಿನಿಂದ ಗುಡಿ ಕಟ್ಟಿ ಗುಡಿಯಲ್ಲಿ ಮಣ್ಣಿನಲ್ಲಿ ರಚಿಸಿದ ಸಪ್ಪಲಮ್ಮನ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ ಅದಕ್ಕೆ ಪೂಜೆ ಸಲ್ಲಿಸಲಾಯಿತು.
ಊರ ಮನೆ ಮನೆಯಿಂದಲೂ ಗೃಹಿಣಿಯರು, ಹೆಂಗಳೆಯರು, ತವರಿಗೆ ಬಂದ ಹೆಣ್ಣು ಮಕ್ಕಳು ತಲೆ ಮೇಲೆ ತಂಬಿಟ್ಟು ದೀಪ ಹೊತ್ತು ಊರು ಹಾಗೂ ದೇವಾಲಯದ ಪ್ರದಕ್ಷಿಣೆ ಹಾಕಿ ಕೆರೆ ಅಂಗಳಕ್ಕೆ ತೆರಳಿ ಅಲ್ಲಿ ಸಪ್ಪಲಮ್ಮ ದೇವಿಗೆ ತಂಬಿಟ್ಟು ದೀಪದಾರತಿ ಬೆಳಗಿದರು. ಇಷ್ಟಾರ್ಥಗಳು ಈಡೇರಲೆಂದು ತಾಯಿಗೆ ಕೈ ಮುಗಿದು ಬೇಡಿಕೊಳ್ಳಲಾಯಿತು.
ಕೋಳಿ ಕುರಿ ಬಲಿ ನೀಡಲಾಯಿತು. ಕುರಿಯ ರಕ್ತ ಹಾಗೂ ಉಪ್ಪು ಹಾಕದೆ ಹೊಸ ಮಡಿಕೆಯಲ್ಲಿ ಬೇಯಿಸಿದ ಅನ್ನವನ್ನು ನೈವೇಧ್ಯವಾಗಿ ಸಪ್ಪಲಮ್ಮ ತಾಯಿಗೆ ಅರ್ಪಿಸಲಾಯಿತು.
ಬುಧವಾರ ಮಾಂಸಾಹಾರದ ವಿವಿಧ ಭಕ್ಷ್ಯ ಭೋಜನವನ್ನು ತಯಾರಿಸಿ ಬಂಧು ಬಳಗ ಸ್ನೇಹಿತರನ್ನು ಕರೆದು ಉಣ ಬಡಿಸಲಿದ್ದಾರೆ. ಇದಕ್ಕಾಗಿ ನೂರಾರು ಕುರಿ ಮೇಕೆ ಕೋಳಿಗಳನ್ನು ಮನೆ ಮುಂದೆ ತಂದು ಕಟ್ಟಿ ಹಾಕಿದ್ದಾರೆ, ಪೆಂಡಾಲ್‌ಗಳನ್ನು ಹಾಕಿದ್ದು ಭೂರಿ ಭೋಜನ ತಯಾರಿಸಲು ಮನೆ ಮನೆಗಳಲ್ಲೂ ಸಕಲ ಸಿದ್ದತೆಗಳು ನಡೆದಿವೆ.
ಹದಿಮೂರು ವರ್ಷಗಳ ನಂತರ ಗ್ರಾಮದಲ್ಲಿ ನಡೆದ ಊರ ಜಾತ್ರೆಯಲ್ಲಿ ಗ್ರಾಮದ ಹಿರಿಯ ಮುಖಂಡರಾದ ಎಂ.ವೆಂಕಟಪ್ಪ, ಡಿ.ವಿ.ಮುನಿಸ್ವಾಮಿ, ಸಿ.ವಿ.ವೆಂಕಟೇಶಪ್ಪ, ಸಿ.ಎಂ.ರಾಧಾಕೃಷ್ಣ, ಎಂ.ಮುನಿವೆಂಕಟಸ್ವಾಮಿ, ಲಕ್ಷ್ಮಪ್ಪ, ನರಸಿಂಹಪ್ಪ, ಚನ್ನರಾಯಪ್ಪ ಸೇರಿದಂತೆ ಗ್ರಾಮದ ಯುವಕರು, ಮುಖಂಡರು, ಮಹಿಳೆಯರು ಎಲ್ಲರೂ ಸಂಭ್ರಮದಿಂದ ಭಾಗವಹಿಸಿದ್ದರು.