Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು KIADB ರೈತ ಪರ ಹೋರಾಟ ಸಮಿತಿ ಪದಾಧಿಕಾರಿಗಳು ಬೃಹತ್ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗುರುವಾರ ಬೆಂಗಳೂರಿನ ಸಚಿವರ ಗೃಹ ಕಚೇರಿಯಲ್ಲಿ ಸಮಿತಿ ಪ್ರತಿನಿಧಿಗಳು ಭೇಟಿಯಾಗಿ ಮನವಿ ಸಲ್ಲಿಸಿದರು. ಸುಮಾರು 13 ಹಳ್ಳಿಗಳ 2,823 ಎಕರೆ ಜಮೀನನ್ನು KIADB ಮೂಲಕ ಭೂಸ್ವಾಧೀನ ಪಡಿಸಿಕೊಂಡು ಕೈಗಾರಿಕಾ ಹೂಡಿಕೆಗಳಿಗಾಗಿ ಸರ್ಕಾರ ಅಧಿಸೂಚನೆ ಹೊರಡಿಸಿ 13 ತಿಂಗಳು ಕಳೆದರೂ ಯಾವುದೇ ಪ್ರಗತಿ ಇಲ್ಲವೆಂದು ಅವರು ದೂರಿದರು.
ಮನವಿಯಲ್ಲಿ, ಸರ್ಕಾರ ತ್ವರಿತಗತಿಯಲ್ಲಿ ಪ್ರಕ್ರಿಯೆ ಚುರುಕುಗೊಳಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ನೀರಾವರಿ ಪ್ರದೇಶಗಳನ್ನು ಹೊರಗಿಟ್ಟು, ರೈತರಿಗೆ ಪ್ರತಿ ಎಕರೆಗೆ ₹3 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, 520 ಎಕರೆ ಜಮೀನು ಸಂಪೂರ್ಣವಾಗಿ ಪಿ.ಎಸ್.ಎಲ್. ಕಂಪನಿಯ ಹೆಸರಿನಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ, ಅದರ ಮೂಲ ರೈತರಿಗೆ ಪರಿಹಾರದ ಹಣ ತಕ್ಷಣ ಜಮಾ ಆಗುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಲಾಯಿತು.
ಇದೇ ವೇಳೆ, ಕೆ.ಐ.ಎ.ಡಿ.ಬಿ ಪರ ನಿಂತ ಕೆಲ ರೈತರ ಮೇಲೆ ಹಲ್ಲೆ ಮತ್ತು ದಬ್ಬಾಳಿಕೆ ನಡೆಸಲಾಗುತ್ತಿರುವುದನ್ನು ಖಂಡಿಸಿ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವ ಎಂ.ಬಿ. ಪಾಟೀಲ್, “ನಾನು ರೈತನ ಕುಟುಂಬದಿಂದ ಬಂದವನಾಗಿದ್ದು, ರೈತರಿಗೆ ಅನ್ಯಾಯವಾಗದಂತೆ ಉತ್ತಮ ಪರಿಹಾರ ನೀಡಲು ಬದ್ಧನಾಗಿದ್ದೇನೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಅಧ್ಯಕ್ಷ ಮುನೇಗೌಡ, ನಾಗೇಶ್ ಗೌಡ, ಕದಸಂಸ ತಾಲ್ಲೂಕು ಸಂಚಾಲಕ ರಾಮಾಂಜನೇಯ ಮತ್ತು ಸುಬ್ರಮಣಿ ಉಪಸ್ಥಿತರಿದ್ದರು.