Sidlaghatta, Chikkaballapur : ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ ಭೂಸ್ವಾಧೀನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ, ನವೆಂಬರ್ 23ರಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಅನಿರ್ದಿಷ್ಟ ಕಾಲದ ಧರಣಿಗೆ ರೈತರು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2,823 ಎಕರೆ ಜಮೀನು ಕೈಗಾರಿಕಾ ಪ್ರದೇಶಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, 80% ರೈತರು ಸ್ವಯಂಪ್ರೇರಿತವಾಗಿ ಒಪ್ಪಿಗೆ ನೀಡಿದ್ದಾರೆ. ಆದರೂ ಅಂತಿಮ ಅಧಿಸೂಚನೆ ಹೊರಡಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಧರಣಿಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ರೈತರ ಪ್ರಮುಖ ಬೇಡಿಕೆಗಳು
– 2,823 ಎಕರೆಗಳಲ್ಲಿ ನೀರಾವರಿ ಭಾಗವನ್ನು ಕೈಬಿಟ್ಟು ಉಳಿದ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು
– ಸ್ವಾಧೀನಗೊಳ್ಳುವ ಜಮೀನಿಗೆ ಪ್ರತಿ ಎಕರೆಗೆ ₹3 ಕೋಟಿ ಪರಿಹಾರ ನೀಡಬೇಕು
– PSL ಕಂಪನಿಗೆ ಸೇರಿದ 525 ಎಕರೆ ಭೂಮಿಯಲ್ಲಿ, ಮದ್ಯವರ್ತಿಗಳ ಮೂಲಕ ರೈತರಿಗೆ ಮಾಡಿರುವ ಒಪ್ಪಂದದಿಂದ ಉಂಟಾದ ಮೋಸ ಸರಿಪಡಿಸಿ, ಸರ್ಕಾರದ ಪರಿಹಾರ ಹಣ ಮೂಲ ರೈತರಿಗೆ ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು
– ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿರುವ ಮೈಕ್ರೋಫೈನಾನ್ಸ್ ಸಾಲವನ್ನು ಮನ್ನಾ ಮಾಡಬೇಕು
– ಮಹಿಳಾ ಸಂಘಗಳಿಗೆ DCC ಬ್ಯಾಂಕ್ ಮೂಲಕ ಮರುಸಬಲೀಕರಣ ಸಾಲ ನೀಡಬೇಕು
– ವಿವಿಧ ಹಳ್ಳಿಗಳಲ್ಲಿ ಬಡ ಕುಟುಂಬಗಳಿಗೆ ನಿವೇಶನ ವಿತರಣೆ ಮಾಡಬೇಕು
– ಕುಸಿಯುತ್ತಿರುವ ಮೆಕ್ಕೆಜೋಳಕ್ಕೆ ತಕ್ಷಣ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿ ಕೇಂದ್ರಗಳನ್ನು ತೆರೆಯಬೇಕು
– ಶಿಡ್ಲಘಟ್ಟ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ, ಕೆಟ್ಟು ನಿಂತಿರುವ ಘಟಕಗಳನ್ನು ದುರಸ್ತಿ ಮಾಡಬೇಕು
ಪ್ರತೀಶ್ ಅವರೊಂದಿಗೆ ಕಾರ್ಯದ್ಯಕ್ಷ ಎಚ್.ಎನ್. ಕದೀರೇಗೌಡ, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಯುವ ಘಟಕ ಜಿಲ್ಲಾಧ್ಯಕ್ಷ ಸುಬ್ರಮಣಿ, ರೈತ ನಾಯಕರಾದ ರಾಮಸ್ವಾಮಿ, ಪ್ರದೀಪ್, ಈರಪ್ಪ, ವೆಂಕಟೇಶ್ ಹಾಗೂ ದಲಿತ ಸಂಘರ್ಷ ಸಮಿತಿಯ ನಾಗವೇಣಿ ಸೇರಿದಂತೆ ಹಲವರು ಹಾಜರಿದ್ದರು.
For Daily Updates WhatsApp ‘HI’ to 7406303366









