Sidlaghatta : ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅಪರ ಸಿವಿಲ್ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ರಂಜಿತಾ ಅವರಿಗೆ, ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ನ್ಯಾಯಾಧೀಶರು ಮತ್ತು ವಕೀಲರ ಸಹಕಾರ ಮುಖ್ಯ
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮದ್ ರೋಷನ್ ಷಾ ಮಾತನಾಡಿ, “ಹೊಸ ಸ್ಥಳಗಳಿಗೆ ತೆರಳಿದಾಗ ಅಧಿಕಾರಿಗಳಿಗೆ ಹೊಸ ಅನುಭವಗಳು ಹಾಗೂ ಸವಾಲುಗಳು ಎದುರಾಗುವುದು ಸಹಜ. ಕೆಲಸ ಮಾಡುವ ಶೈಲಿ ಎಲ್ಲರಲ್ಲೂ ವಿಭಿನ್ನವಾಗಿದ್ದರೂ, ತಪ್ಪುಗಳನ್ನು ಮುಕ್ತವಾಗಿ ಚರ್ಚಿಸಿದಾಗ ಮಾತ್ರ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರು ಹಾಗೂ ವಕೀಲರು ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ ಮಾತ್ರ ಕಕ್ಷಿದಾರರಿಗೆ ಸಮಯಕ್ಕೆ ಸರಿಯಾಗಿ ನ್ಯಾಯ ದೊರೆಯುತ್ತದೆ,” ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ನ್ಯಾಯಾಲಯದಲ್ಲಿ ಬಾಕಿ ಇರುವ ಚೆಕ್ ಬೌನ್ಸ್ ಹಾಗೂ ಹಳೆಯ ಸಿವಿಲ್ ಪ್ರಕರಣಗಳ ವಿಲೇವಾರಿಗೆ ವಕೀಲರು ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಶಿಡ್ಲಘಟ್ಟದ ದಿನಗಳು ಸದಾ ನೆನಪಿನಲ್ಲಿರುತ್ತವೆ: ನ್ಯಾಯಾಧೀಶೆ ರಂಜಿತಾ
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪರ ಸಿವಿಲ್ ನ್ಯಾಯಾಧೀಶೆ ರಂಜಿತಾ, “ಶಿಡ್ಲಘಟ್ಟ ನನಗೆ ಮೊದಲ ನೇಮಕಾತಿ ಸ್ಥಳವಾಗಿದ್ದು, ಈ ಸ್ಥಳ ಹಾಗೂ ಇಲ್ಲಿನ ವಾತಾವರಣ ಸದಾ ನೆನಪಿನಲ್ಲಿ ಉಳಿಯಲಿದೆ,” ಎಂದು ಭಾವುಕರಾದರು.
“ಇಲ್ಲಿನ ವಕೀಲರಿಂದ ಉತ್ತಮ ಸಹಕಾರ ದೊರೆತಿದ್ದರಿಂದ, ಹೆಚ್ಚಿನ ಪ್ರಕರಣಗಳ ಒತ್ತಡದ ನಡುವೆಯೂ ನ್ಯಾಯಾಲಯದ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಯಿತು. ಕಲಾಪದ ವೇಳೆ ವಕೀಲರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡೇ ಕ್ರಮವಹಿಸಲಾಗಿದೆಯೇ ಹೊರತು, ಯಾರನ್ನೂ ಅನಾವಶ್ಯಕವಾಗಿ ಕಾಯಿಸುವ ಉದ್ದೇಶ ನಮಗಿರಲಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು. ಜೊತೆಗೆ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರೋಷನ್ ಷಾ ಅವರ ಮಾರ್ಗದರ್ಶನ ಹಾಗೂ ಸಹೋದ್ಯೋಗಿಗಳ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಹಿರಿಯ ವಕೀಲ ಪಾಪಿರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಸೇರಿದಂತೆ ಹಲವು ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.








