Kalanayakanahalli, Sidlaghatta : ಸಾಮಾನ್ಯ ಕೃಷಿ ಮಾಡುವ ರೈತರು ಮತ್ತು ಹೈನುಗಾರಿಕೆ ಮಾಡುವ ರೈತರು ತಮ್ಮ ಕುರಿ ಮೇಕೆ ಎತ್ತು ಎಮ್ಮೆ ಮುಖ್ಯವಾಗಿ ಸೀಮೆ ಹಸುಗಳಿಗೆ ತಪ್ಪದೆ ಜೀವ ವಿಮೆ ಮಾಡಿಸಿ ಎಂದು ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ರಾಮಯ್ಯ ರೈತರಿಗೆ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿ ಕಾಳನಾಯಕನಹಳ್ಳಿಯಲ್ಲಿ ಜಿಕೆವಿಕೆ ಕೃಷಿ ಪದವಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯ್ಕಕ್ರಮದಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆ, ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹಾಲು ನೀಡುವ ಸೀಮೆ ಹಸು, ಸೀಮೆ ಕರುಗಳ ಬೆಲೆ ಹೆಚ್ಚಿದೆ. ನಾನಾ ಕಾರಣಗಳಿಂದ ಅವುಗಳು ಮೃತಪಟ್ಟರೆ ರೈತರಿಗೆ ಬಹಳಷ್ಟು ನಷ್ಟವಾಗುತ್ತದೆ. ಹಾಗಾಗಿ ತಪ್ಪದೆ ಜೀವ ವಿಮೆ ಮಾಡಿಸಿ. ಸಹಕಾರ ಸಂಘದಿಂದ ಅರ್ಧ ಮಿಕ್ಕ ಅರ್ಧ ವಿಮೆಯ ಪ್ರೀಮಿಯಂ ಹಣವನ್ನು ಮಾತ್ರ ರೈತರು ಕಟ್ಟಬೇಕಾಗುತ್ತದೆ ಎಂದರು.
ಗುಣಮಟ್ಟದ ಹಾಲು ಉತ್ಪಾದನೆಯತ್ತ ರೈತರು ಹೆಚ್ಚು ಗಮನ ಹರಿಸಬೇಕು, ಗುಣಮಟ್ಟದ ಆಧಾರದಲ್ಲಿ ಹಾಲಿಗೆ ಬೆಲೆ ನೀಡುವುದರಿಂದ ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸುವುದು ರೈತರು ಹಾಗೂ ಸಹಕಾರ ಸಂಘಕ್ಕೂ ಆರ್ಥಿಕವಾಗಿ ಲಾಭ ಆಗಲಿದೆ ಎಂದರು.
ಬರಡು ರಾಸುಗಳ ನಿರ್ವಹಣೆ ಆರ್ಥಿಕವಾಗಿ ಹೊರೆ ಆಗಲಿದೆ. ಹಾಗಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ, ಔಷದೋಪಚಾರ, ಆರೈಕೆಯಿಂದ ಬರಡುತನ ಹೋಗಲಿದೆ, ಪಶು ವೈದ್ಯರ ಮಾರ್ಗದರ್ಶನ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಅವರ ನೆರವು ಮಾರ್ಗದರ್ಶನ ಪಡೆಯಲು ರೈತರಲ್ಲಿ ಮನವಿ ಮಾಡಿದರು.
ಜಿಕೆವಿಕೆ ಸಹ ಪ್ರಾಧ್ಯಾಪಕಿ ಡಾ.ಸಿ.ಎಂ.ಸವಿತಾ ಮಾತನಾಡಿ, ರೈತರು ಉತ್ತಮ ಫಸಲು, ಬೆಳೆಯನ್ನು ಬೆಳೆಯಬೇಕಾದರೆ ಪೋಷಕಾಂಶ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ ಮುಖ್ಯವಾಗಿ ಆಗಬೇಕಿದೆ. ಆಗ ಮಾತ್ರ ಉತ್ತಮ ಇಳುವರಿ ಸಿಗಲಿದೆ ಎಂದರು.
ಕೃಷಿ, ತೋಟಗಾರಿಕೆ, ಹೈನುಗಾರಿಕೆ ಯಾವುದೆ ಇರಲಿ ರೈತರು ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಇನ್ನಷ್ಟು ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬರಡು ರಾಸುಗಳ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ, ರೇಬಿಸ್ ಲಸಿಕೆ ಅಭಿಯಾನ, ಕಾಲು ಮತ್ತು ಬಾಯಿ ರೋಗ ಲಸಿಕೆ ಅಭಿಯಾನ, ಜಂತುಹುಳು ನಿವಾರಣೆ ಔಷಧಿಗಳ ವಿತರಣೆ, ಮಿಶ್ರತಳಿ ಕರುಗಳ ಪ್ರದರ್ಶನ ನಡೆಯಿತು.
ವಿದ್ಯಾರ್ಥಿ ಲೋಕೇಶ್ ಮಾತನಾಡಿ, ನಾವು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಮೂರು ತಿಂಗಳ ಕಾಲ ಕಾಳನಾಯಕನಹಳ್ಳಿ ಗ್ರಾಮದಲ್ಲಿ ಬಂದು ರೈತರ ಜತೆಗೂಡಿ ಅವರ ಕುಟುಂಬದಲ್ಲಿ ನಾವು ಕೂಡ ಒಬ್ಬರಾಗಿದ್ದೇವೆ ಎಂದರು.
ರೈತರ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ತಿಳಿಸುವುದು, ಚರ್ಚೆ, ಸಂವಾದ, ತರಬೇತಿಯಂತ ಕಾರ್ಯಕ್ರಮಗಳ ಮೂಲಕ ಪರಸ್ಪರ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗುತ್ತಿದೆ ಎಂದು ಹೇಳಿದರು.
ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪನ್ನ ಹೆಚ್ಚು ಲಾಭ ಮಾಡಿಕೊಡುವುದು ನಮ್ಮ ಉದ್ದೇಶ, ಆ ನಿಟ್ಟಿನಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದ ಎಲ್ಲರ ಸಹಕಾರ ಮುಖ್ಯ ಎಂದರು.
ಗ್ರಾಮದ ಮುಖಂಡರಾದ ಎನ್.ರಮೇಶ್, ಮಂಜೇಶ್, ಡಾ.ಸುಧಾ, ಡಾ.ಆನಂದ್, ಡಾ.ಪ್ರಶಾಂತ್, ರಮೇಶ್ ಕುಮಾರ್, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.