Sidlaghatta : ಶಿಡ್ಲಘಟ್ಟ ನಗರದ ಹೃದಯ ಭಾಗದಲ್ಲಿರುವ ಕೋಟೆ ವೃತ್ತದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಈಗ ಆವರಣದಲ್ಲಿ ಪಾದಚಾರಿ ಮಾರ್ಗ, ಹುಲ್ಲು ಹಾಸು ಮತ್ತು ಪ್ರಸಾದ ವಿನಿಯೋಗ ಸ್ಥಳ ನಿರ್ಮಾಣ ಕಾರ್ಯಗಳು ಅಂತಿಮ ಹಂತದಲ್ಲಿವೆ ಎಂದು ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಎ. ನಾಗರಾಜ್ ತಿಳಿಸಿದ್ದಾರೆ.
ಅವರು ದೇವಾಲಯದ ಜೀರ್ಣೋದ್ಧಾರ ಮತ್ತು ಪುನರ್‌ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ಆರ್ಯವೈಶ್ಯ ಮಂಡಳಿಯಿಂದ ನೀಡಲಾದ ₹1.6 ಲಕ್ಷ ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದರು.
“ಈ ದೇವಾಲಯ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಮುಜರಾಯಿ ಇಲಾಖೆಗೆ ಸೇರಿದರೂ, ಭಕ್ತರು ಮತ್ತು ದಾನಿಗಳ ಸಹಕಾರದಿಂದ ಸಂಪೂರ್ಣ ಕಲ್ಲಿನ ಕಟ್ಟಡವನ್ನು ಪುನರ್‌ನಿರ್ಮಾಣ ಮಾಡಲಾಗಿದೆ. ಈಗ ದೇವಾಲಯ ಅತ್ಯಂತ ಸುಂದರ ರೂಪ ಪಡೆದುಕೊಂಡಿದೆ,” ಎಂದು ಹೇಳಿದರು.
ನವೆಂಬರ್ 1ರಿಂದ ಮೂರು ದಿನಗಳ ಕಾಲ ನಡೆಯಲಿರುವ ಪುನರ್‌ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ಧಾರ ಕಾರ್ಯಕ್ರಮದ ಸಂದರ್ಭದಲ್ಲಿ ಸುಮಾರು 5,000 ಭಕ್ತರಿಗೆ ಪ್ರತಿದಿನ ಪ್ರಸಾದ ಮತ್ತು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನಾಗರಾಜ್ ವಿವರಿಸಿದರು. ಭಕ್ತರು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಕೋರಿದರು.
ಆರ್ಯವೈಶ್ಯ ಮಂಡಳಿಯ ವತಿಯಿಂದ ₹1.6 ಲಕ್ಷ ದೇಣಿಗೆಯನ್ನು ಮಂಡಳಿ ಅಧ್ಯಕ್ಷ ಮಹೇಶ್ ಬಾಬು, ಕಾರ್ಯದರ್ಶಿ ರೂಪಸಿ ರಮೇಶ್, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಜಯಶ್ರೀ ಕೇದಾರನಾಥ್, ಯುವಜನ ಸಂಘದ ಅಧ್ಯಕ್ಷ ಅರವಿಂದ್, ಹಾಗೂ ಇತರ ಸದಸ್ಯರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಲವಾರು ದೇವಾಲಯ ಅಭಿವೃದ್ದಿ ಸಮಿತಿ ಸದಸ್ಯರು ಹಾಗೂ ಭಕ್ತರು ಹಾಜರಿದ್ದರು.







