Kothanur, Sidlaghatta, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನಲ್ಲಿ ಬೆಂಗಳೂರಿನ ಜಿಕೆವಿಕೆಯ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಗ್ರಾಮೀಣ ಕೃಷಿ ಕಾರ್ಯಾನುಭವ (Rural Agricultural Work Experience Program) ಯಶಸ್ವಿಯಾಗಿ ನಡೆಸಿ, “ಕೃಷಿ ವಸಂತ” ಕಾರ್ಯಕ್ರಮದೊಂದಿಗೆ ಅದರ ಸಮಾರೋಪವನ್ನು ಆಚರಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೀರಪ್ಪನಹಳ್ಳಿ ನರಸಿಂಹಮೂರ್ತಿ, ಅವರ ಸಹೋದರ ದ್ಯಾವಪ್ಪ, ಮಾಜಿ ಶಾಸಕ ಎಂ.ಎಂ. ರಾಜಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಹಾಗೂ ತಹಶೀಲ್ದಾರ್ ಗಗನ ಸಿಂಧು ರವರು ಭಾಗವಹಿಸಿದರು. ವಿದ್ಯಾರ್ಥಿಗಳು ಬೆಳೆದ ಸೊಪ್ಪು, ತರಕಾರಿ ಮತ್ತು ವಿವಿಧ ಬೆಳೆಗಳ ವಸ್ತು ಪ್ರದರ್ಶನಕ್ಕೂ ಚಾಲನೆ ನೀಡಲಾಯಿತು.
ಬೀರಪ್ಪನಹಳ್ಳಿ ದ್ಯಾವಪ್ಪ ಅವರು ಮಾತನಾಡಿ, “ಜಿಕೆವಿಕೆ ವಿದ್ಯಾರ್ಥಿಗಳು ರೈತರಿಗೆ ವೈಜ್ಞಾನಿಕ ಕೃಷಿ ವಿಧಾನಗಳ ಬಗ್ಗೆ ಅಮೂಲ್ಯ ಪಾಠ ಕಲಿಸಿದ್ದಾರೆ. ಇಂತಹ ಜ್ಞಾನದಿಂದ ರೈತರು ನಷ್ಟವಿಲ್ಲದ ಕೃಷಿ ಮಾಡಬಹುದು” ಎಂದರು. ಸೀಕಲ್ ಆನಂದ್ ಗೌಡ ಅವರು, “ಹಳೆಯ ಪದ್ಧತಿಗಳನ್ನು ಬಿಟ್ಟು ತಂತ್ರಜ್ಞಾನಾಧಾರಿತ ಕೃಷಿಯನ್ನು ಅಳವಡಿಸಿಕೊಂಡರೆ ರೈತರು ಯಶಸ್ಸು ಕಾಣಬಹುದು” ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಗಗನ ಸಿಂಧು ಅವರು, “ಹಳ್ಳಿಗಳಲ್ಲಿ ವೈಜ್ಞಾನಿಕ ಕೃಷಿಯ ಪ್ರಯೋಗವನ್ನು ಮುಂದುವರಿಸುವುದು ನಿಜವಾದ ಪ್ರಗತಿ. ಪ್ರತಿ ಹಳ್ಳಿಯಲ್ಲಿಯೂ ಇಂತಹ ಕಾರ್ಯಗಳು ನಡೆಯಲಿ” ಎಂದು ಹಾರೈಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ವಿದ್ಯಾರ್ಥಿಗಳ ಪ್ರಯತ್ನವನ್ನು ಮೆಚ್ಚಿ, “ರೈತರು ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಬೀರಪ್ಪನಹಳ್ಳಿ ಗೌಡರ ನರಸಿಂಹಮೂರ್ತಿ ಅವರು ಸುಮಾರು 1,500 ಜನರಿಗೆ ಊಟದ ವ್ಯವಸ್ಥೆ ಮಾಡಿಸಿದ್ದರು. ಯುವ ಮುಖಂಡ ಕೃಷ್ಣ ಅವರು “ನಮ್ಮ ತಾತನವರ ಪ್ರೇರಣೆಯಿಂದ ರೈತರಿಗೆ ಊಟ ಬಡಿಸುವ ಸಂಪ್ರದಾಯ ಮುಂದುವರಿಸುತ್ತಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಕೆವಿಕೆ ಅಧಿಕಾರಿ ಕೆ.ಎಸ್. ರಾಜಶೇಖರಪ್ಪ, ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಶ್ರೀನಿವಾಸ್, ಪಶುವೈದ್ಯಾಧಿಕಾರಿ ಶ್ರೀನಾಥ್ ರೆಡ್ಡಿ, ಮುಖಂಡರು ತೇಜಸ್ ಸ್ವರೂಪ ರೆಡ್ಡಿ, ಬೀರಪ್ಪನಹಳ್ಳಿ ಹರಿಕೃಷ್ಣ, ಕೊತ್ತನೂರು ಚಂದ್ರಶೇಖರ್, ರವಿಚಂದ್ರ, ನವೀನ್ ಕುಮಾರ್, ವಿದ್ಯಾರ್ಥಿಗಳು ಧನುಷ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು.