Melur, Sidlaghatta : ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ಭಾವಪೂರ್ಣ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಬೆಂಗಳೂರು ಮೂಲದ ಮಾರ್ಗದರ್ಶಿ ವಿಕಲಚೇತನ ಸ್ವಯಂ ಸೇವಾ ಸಂಸ್ಥೆ, ಸ್ಟೇಟ್ ಸ್ಟ್ರೀಟ್ ಮತ್ತು ನವಜೀವನ ಸೇವಾ ಸಂಸ್ಥೆ ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿದ್ದವು.
ಕಾರ್ಯಕ್ರಮದ ಭಾಗವಾಗಿ ಚಿತ್ರಕಲಾ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ 10ನೇ ತರಗತಿಯ ಮುರಳಿ, 8ನೇ ತರಗತಿಯ ಹರ್ಷ ಮತ್ತು 10ನೇ ತರಗತಿಯ ಮಧುಶ್ರೀ ವಿಜೇತರಾಗಿ ಬಹುಮಾನ ಸ್ವೀಕರಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನೂ ವಿತರಿಸಲಾಯಿತು. ಶಾಲೆಯ ಮಕ್ಕಳಿಂದ ಹಾಗೂ ಅಂಗವಿಕಲರ ಸಹಭಾಗಿತ್ವದೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಗೆ ಮೆರವಣಿಗೆ ನಡೆಯಿತು.
ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ. ಉಮೇಶ್ ಮಾತನಾಡಿ, “ಅಂಗವೈಕಲ್ಯ ಎಂದರೆ ಶಕ್ತಿ ಕಡಿಮೆ ಎಂಬುದಲ್ಲ. ಸಾಧನೆಗೆ ಇಚ್ಛಾಶಕ್ತಿ ಇರುವವರು ಯಾವುದೇ ಅಡ್ಡಿಯನ್ನು ಮೀರಿ ಸಾಧಿಸಬಹುದು. ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಜವಾಬ್ದಾರರು. ಪರಿಸರದ ರಕ್ಷಣೆಗೆ ಗಿಡಗಳನ್ನು ನೆಡುವ ಕೆಲಸಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಮುಂದಾಗಬೇಕು” ಎಂದು ತಿಳಿಸಿದರು.
ಮಾರ್ಗದರ್ಶಿ ಸಂಸ್ಥೆಯ ಸಂಚಾಲಕಿ ಗೀತಾ ಅವರು ಮಾತನಾಡಿ, “ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪಠ್ಯಬಾಹ್ಯ ಜ್ಞಾನವನ್ನು ನೀಡುವ ಮೂಲಕ ಜಾಗೃತಿ ಮೂಡಿಸುತ್ತವೆ. ನಾವು ಪ್ರತಿವರ್ಷ ಒಂದೊಂದು ಶಾಲೆ ಆಯ್ಕೆ ಮಾಡಿಕೊಂಡು, ಪರಿಸರ ಕುರಿತ ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿ ಭಾವನೆ ಬೆಳೆಸುವ ಕೆಲಸ ಮಾಡುತ್ತೇವೆ” ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ. ಭಾಸ್ಕರ್, ಎಸ್‌ಡಿಎಂಸಿ ಅಧ್ಯಕ್ಷೆ ನಂದಿನಿ, ಸದಸ್ಯ ಚಂದ್ರೇಗೌಡ, ಮಾರ್ಗದರ್ಶಿ ಸಂಸ್ಥೆಯ ಸೀತಾ, ನವಜೀವನ ಸಂಸ್ಥೆಯ ಮುನಿರಾಜು ಹಾಗೂ ರವಿ, ಶಿಕ್ಷಕರು ಹಾಗೂ ಸಹಶಿಕ್ಷಕರಾದ ಸುಜಾತ, ಸವಿತಾ, ಗಾಯತ್ರಿ, ಪದ್ಮಾ, ವೆಂಕಟಶಿವಾರೆಡ್ಡಿ, ನಾಗರಾಜ್, ದೇವಮ್ಮ, ಅರುಣ, ಸೌಂದರ್ಯ ಮತ್ತು ಇನ್ನಿತರರು