Sidlaghatta, chikkaballapur : ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿ ಚುನಾವಣೆಗೆ ಹೋದರೆ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚನೆ ಖಚಿತ, ಹಾಗೂ ಎಚ್.ಡಿ. ಕುಮಾರಸ್ವಾಮಿ ಮೂರನೇ ಬಾರಿ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಶಿಡ್ಲಘಟ್ಟ ಶಾಸಕರಾದ ಬಿ.ಎನ್. ರವಿಕುಮಾರ್ ಹೇಳಿದರು.
ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದಿಲ್ಲ, ಬದಲಿಗೆ ಬಿಜೆಪಿ ಸರ್ಕಾರದ ಕೆಲವು ನಿರ್ಧಾರಗಳು ಮತದಾರರ ಮನಸ್ಸು ಬದಲಾಯಿಸಿದವು ಎಂದರು.
“ಕಾಂಗ್ರೆಸ್‌ಗೆ ಜನರು 136 ಸ್ಥಾನ ನೀಡಿದರೂ, ಕೇವಲ ಒಂದೂವರೆ ವರ್ಷಗಳಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ 143 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ, ಇದು ಜನರ ನಿಜವಾದ ಅಭಿಪ್ರಾಯವನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.
ರವಿಕುಮಾರ್ ಅವರು, “2028ರ ವೇಳೆಗೆ ರಾಜ್ಯದ ಜನರ ವಿಶ್ವಾಸ ಮತ್ತೆ ಎನ್‌ಡಿಎ ಕಡೆಗೆ ಬರುವದು ಖಚಿತ” ಎಂದು ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 24ರಂದು ಶಿಡ್ಲಘಟ್ಟಕ್ಕೆ ಆಗಮಿಸುತ್ತಿದ್ದಾರೆ, ಆ ಸಂದರ್ಭದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ, ರಾಮಸಮುದ್ರ ಕೆರೆಯಿಂದ ಕುಡಿಯುವ ನೀರು ಯೋಜನೆ, ಒಳಚರಂಡಿ ಹಂತ-2 ಕಾಮಗಾರಿಗಳು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಅದೇ ವೇಳೆ 22 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳು ಹಾಗೂ ಉತ್ತರ ವಿಶ್ವವಿದ್ಯಾಲಯದ 2ನೇ ಹಂತದ 95 ಕೋಟಿ ವೆಚ್ಚದ ಯೋಜನೆಗೂ ಗುದ್ದಲಿಪೂಜೆ ನಡೆಯಲಿದೆ ಎಂದರು.
ಮೂಲತಃ ನವೆಂಬರ್ 8ರಂದು ಕಾರ್ಯಕ್ರಮ ನಿಗದಿಯಾಗಿದ್ದರೂ ಕನಕ ಜಯಂತಿ ಇರುವ ಕಾರಣ, ಅದನ್ನು ಮುಂದೂಡಲಾಗಿದೆ ಎಂದು ಅವರು ವಿವರಿಸಿದರು.
ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಚ್.ಡಿ. ದೇವೇಗೌಡರು ಅನಾರೋಗ್ಯದಿಂದ ಸಂಪೂರ್ಣ ಗುಣಮುಖರಾಗಿದ್ದು, ಶೀಘ್ರದಲ್ಲೇ ಪಕ್ಷ ಸಂಘಟನೆಗೆ ಮರುಪ್ರವೇಶಿಸಲಿದ್ದಾರೆ. ಅವರ ಆಶೀರ್ವಾದದಿಂದ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.







