Sidlaghatta, Chikkaballapur District : ನಗರದ ವ್ಯಾಪ್ತಿಯ 31 ವಾರ್ಡುಗಳಲ್ಲಿ ಮಳೆಯಿಂದಾಗಿ ಉಂಟಾದ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ನಗರಸಭೆಯ ಗಮನಕ್ಕೆ ತರಬೇಕು, ನಾಗರಿಕರ ಅಸೌಕರ್ಯ ನಿವಾರಣೆಗಾಗಿ ನಾವು ಸದಾ ಸಿದ್ಧವಿದ್ದೇವೆ ಎಂದು ನಗರಸಭೆ ಪೌರಾಯುಕ್ತೆ ಜಿ. ಅಮೃತ ಹೇಳಿದರು.
ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ವಿಜಯಲಕ್ಷ್ಮಿ ವೃತ್ತ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯದ ತೊಂದರೆ ಉಂಟಾದ ಹಿನ್ನೆಲೆಯಲ್ಲಿ, ಅವರು ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ನಾಗರಿಕರು, “ವಿಜಯಲಕ್ಷ್ಮಿ ವೃತ್ತದ ಬಳಿಯ ರಾಜಕಾಲುವೆ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ, ಇದರಿಂದ ಮಳೆ ಬಂದಾಗ ನೀರು ನಿಲ್ಲುತ್ತದೆ ಮತ್ತು ಜನಜೀವನ ಅಸ್ತವ್ಯಸ್ತವಾಗುತ್ತದೆ” ಎಂದು ದೂರು ಸಲ್ಲಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ಜಿ. ಅಮೃತ “ರಾಜಕಾಲುವೆ ಅಥವಾ ಚರಂಡಿಗಳ ಮೇಲೆ ಅಕ್ರಮ ನಿರ್ಮಾಣ ಮಾಡಿದರೆ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಮತ್ತು ಅವರ ನಿರ್ದೇಶನದಂತೆ ತೆರವು ಕ್ರಮ ಕೈಗೊಳ್ಳಲಾಗುತ್ತದೆ. ನಾಗರಿಕರು ಸಹಕರಿಸಬೇಕು,” ಎಂದು ಅವರು ತಿಳಿಸಿದರು.
ಅವರು ಮುಂದುವರೆದು, “ಮನೆ ಮತ್ತು ಅಂಗಡಿಗಳ ತ್ಯಾಜ್ಯವನ್ನು ರಸ್ತೆಯ ಮೇಲೆ ಅಥವಾ ಚರಂಡಿಗಳಲ್ಲಿ ಸುರಿಯಬಾರದು, ಬದಲಾಗಿ ನಗರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಬೇಕು. ಸ್ವಚ್ಛ ನಗರ – ನಮ್ಮೆಲ್ಲರ ಜವಾಬ್ದಾರಿ,” ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಸ್ಥಳದಲ್ಲಿದ್ದ ನಗರಸಭೆ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ, ಸದಸ್ಯರು ನಾರಾಯಣಸ್ವಾಮಿ, ಮಂಜುನಾಥ್ (ಬಸ್), ಆರೋಗ್ಯ ನಿರೀಕ್ಷಕ ನರೇಶ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.







