Sidlaghatta : ಶಿಡ್ಲಘಟ್ಟ ನಗರದ ನೆಹರು ಕ್ರೀಡಾಂಗಣದಲ್ಲಿ ಶನಿವಾರ ಪೌರಕಾರ್ಮಿಕ ದಿನಾಚರಣೆ 2025 ಅಂಗವಾಗಿ ಪೌರಕಾರ್ಮಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರಸಭಾ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ ಮಾತನಾಡಿ, ಪೌರಕಾರ್ಮಿಕರು ನಗರ ಸ್ವಚ್ಛತೆ, ನೀರು ಸರಬರಾಜು ಮುಂತಾದ ಕೆಲಸಗಳಲ್ಲಿ ವರ್ಷಪೂರ್ತಿ ನಿರತರಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಾರೆ. ಅವರ ಪರಿಶ್ರಮಕ್ಕೆ ಕೃತಜ್ಞತೆ ಸೂಚಿಸುವುದರ ಜೊತೆಗೆ, ಉತ್ಸಾಹ ತುಂಬಲು ಮತ್ತು ಮನಸ್ಸಿಗೆ ಹಸಿವು ತರಲು ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ನಗರಸಭಾ ಸದಸ್ಯ ಎಲ್. ಅನಿಲ್ ಕುಮಾರ್ ಅವರು, ಪೌರಕಾರ್ಮಿಕರು ಶ್ರಮಜೀವಿಗಳು, ನಮ್ಮೂರ ಹೆಮ್ಮೆ ಮತ್ತು ಆಸ್ತಿಯು. ಅವರ ನಿಸ್ವಾರ್ಥ ಸೇವೆಗೆ ಬೆಲೆಕಟ್ಟಲಾಗದು. ಸೆಪ್ಟೆಂಬರ್ 23ರಂದು ನಡೆಯುವ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಈ ಕ್ರೀಡೆಗಳು ಅವರ ಮಾನಸಿಕ ಬಲವನ್ನು ಹೆಚ್ಚಿಸಿ ಸಂತೋಷ ನೀಡುತ್ತವೆ ಎಂದರು.
100 ಮೀಟರ್ ಓಟ, ಗುಂಡು ಎಸೆತ, ಲಿಂಬು ಸ್ಪೂನ್, ಚೀಲ ಓಟ, ಮ್ಯೂಸಿಕಲ್ ಚೇರ್, ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳಲ್ಲಿ ಪೌರಕಾರ್ಮಿಕರು ಉತ್ಸಾಹದಿಂದ ಭಾಗವಹಿಸಿದರು. ಪೌರಾಯುಕ್ತೆ ಜಿ. ಅಮೃತ ಅವರು ಸ್ವತಃ ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡು ಪೌರಕಾರ್ಮಿಕರನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರು ಮೌಲಾ, ಅನಿಲ್ ಕುಮಾರ್, ಸುರೇಶ್, ಆಸೀಫ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಹುರಿದುಂಬಿಸಿದರು. ತೀರ್ಪುಗಾರರಾಗಿ ಗಂಜಿಗುಂಟೆ ಪ್ರೌಢಶಾಲೆಯ ಶಿಕ್ಷಕಿ ನೇತ್ರಾವತಿ ಮತ್ತು ಬಿಇಓ ಕಚೇರಿಯ ದೇವೇಂದ್ರ ಕಾರ್ಯನಿರ್ವಹಿಸಿದರು.