Sidlaghatta : ಶಿಡ್ಲಘಟ್ಟ ನಗರದಲ್ಲಿ ಬೇಸಿಗೆ ಕಾಲದಲ್ಲಿ ಎದುರಾಗುವ ನೀರಿನ ತೊಂದರೆಯನ್ನು ತಡೆಗಟ್ಟುವ ಉದ್ದೇಶದಿಂದ 2024–25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ₹60 ಲಕ್ಷ ಹಾಗೂ SFC ಯೋಜನೆಯಡಿ ₹9 ಲಕ್ಷ ರೂಗಳನ್ನು ಒಟ್ಟುಗೂಡಿಸಿ ಒಟ್ಟು 13 ಕೊಳವೆ ಬಾವಿಗಳನ್ನು ತೋಡುವ ಕಾರ್ಯ ಪ್ರಾರಂಭಗೊಂಡಿದೆ ಎಂದು ನಗರಸಭಾ ಸದಸ್ಯೆ ಚಿತ್ರಾ ಮನೋಹರ್ ತಿಳಿಸಿದರು.
ನಗರದ 3ನೇ ವಾರ್ಡಿನಲ್ಲಿ ಗುರುವಾರ ಹೊಸ ಕೊಳವೆ ಬಾವಿ ತೋಡುವ ಕಾರ್ಯಕ್ಕೆ ಮುನ್ನ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. “ನಗರದ ವಿವಿಧೆಡೆ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಬೇಸಿಗೆಯೊಳಗೆ ನಾಗರಿಕರಿಗೆ ನಿರಂತರ ನೀರು ಪೂರೈಕೆ ಮಾಡಲು ಈ ಬಾವಿಗಳು ನೆರವಾಗಲಿವೆ,” ಎಂದು ಹೇಳಿದರು.
ನಗರಸಭಾ ಸದಸ್ಯ ಎಲ್. ಅನಿಲ್ ಕುಮಾರ್ ಮಾತನಾಡಿ, “ಮುಂದಿನ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಕೊರತೆ ಉಂಟಾಗದಂತೆ ಮತ್ತು ಯಾವುದಾದರೂ ಬಾವಿಯ ಮೋಟಾರ್ ದೋಷಗೊಂಡರೂ ಪರ್ಯಾಯ ವ್ಯವಸ್ಥೆ ಇರಲೆಂದು ಈ ಯೋಜನೆ ಜಾರಿಗೊಳಿಸಲಾಗಿದೆ,” ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಿವಲೀಲಾ ರಾಜಣ್ಣ ಅವರು ಮಾತನಾಡಿ, “ನಗರದ ನಾಗರಿಕರು ನಗರಸಭೆಯಿಂದ ಬಯಸುವುದು ಮೂಲ ಸೌಕರ್ಯ – ನೀರು, ಸ್ವಚ್ಛತೆ ಹಾಗೂ ಬೀದಿ ದೀಪಗಳು. ಈ ಮೂಲಭೂತ ಅಗತ್ಯಗಳನ್ನು ಒದಗಿಸಿದರೆ ನಾಗರಿಕರಿಂದ ಯಾವ ಆಕ್ಷೇಪಣೆಗಳೂ ಬರುವುದಿಲ್ಲ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಸ್ಥಳೀಯ ಮುಖಂಡರು ಮನೋಹರ್, ನವೀನ್, ನಾಗರಾಜ್ ಹಾಗೂ ವಾರ್ಡಿನ ನಾಗರಿಕರು ಹಾಜರಿದ್ದರು.
For Daily Updates WhatsApp ‘HI’ to 7406303366









