Muttur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿಯ ವಾರ್ಷಿಕ ಉತ್ಸವವನ್ನು ಭಕ್ತಿ, ಸಡಗರ ಮತ್ತು ಸಾಮರಸ್ಯದ ವಾತಾವರಣದಲ್ಲಿ ಗ್ರಾಮಸ್ಥರು ಆಚರಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮಸ್ಥರು ಒಟ್ಟಾಗಿ ಸೇರಿ ಹೂವಿನ ಅಲಂಕಾರದಿಂದ ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿತರಿಸಿದರು. ನಂತರ ಉತ್ಸವ ಮೂರ್ತಿಯನ್ನು ಡೋಳು, ನಾದಸ್ವರದ ಸದ್ದುಗಳಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಉತ್ಸವದ ವೇಳೆ ಮನೆ ಮನೆಗಳಲ್ಲೂ ಸ್ವಾಮಿಗೆ ಭಕ್ತಿಪೂರ್ವಕ ಸ್ವಾಗತ ಮತ್ತು ಪೂಜೆ ಸಲ್ಲಿಸಲಾಯಿತು.
ಗ್ರಾಮದ ಹಿರಿಯ ಮುಖಂಡ ಮುತ್ತೂರು ಜಯರಾಜ್ ಮಾತನಾಡಿ, “ನಮ್ಮ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಾತಿ, ಮತ, ಪಕ್ಷದ ಭೇದವಿಲ್ಲದೆ ಎಲ್ಲರೂ ಒಂದಾಗಿ ಭಾಗವಹಿಸುವುದು ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ. ಕೆರೆ ಅಂಚಿನ ಆಂಜನೇಯಸ್ವಾಮಿ ನಮ್ಮ ಊರಿನ ರಕ್ಷಕ. ಕೇಳಿದ ವರವನ್ನೆಲ್ಲಾ ಕೊಡುತ್ತಾನೆ,” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಮುಖಂಡರು ಎಂ.ಎಸ್. ಬೈರಪ್ಪ, ಎಂ.ಬಿ. ಬೈರಾರೆಡ್ಡಿ, ಶ್ರೀನಿವಾಸ್, ಕೆ.ಎಂ. ಜಯರಾಜ್, ದೋಬಿ ವೆಂಕಟೇಶಪ್ಪ ಹಾಗೂ ಅನೇಕ ಗ್ರಾಮಸ್ಥರು ಭಾಗವಹಿಸಿದರು.







