Narayanadasarahalli, Sidlaghatta : “ಗ್ರಾಮಸ್ಥರ ದಶಕಗಳ ಬೇಡಿಕೆಯಾಗಿದ್ದ ನಾರಾಯಣದಾಸರಹಳ್ಳಿ ರಸ್ತೆ ಅಭಿವೃದ್ಧಿ ಕಾರ್ಯ ಈಗ ಚುರುಕುಗೊಂಡಿದ್ದು, ಶೀಘ್ರದಲ್ಲೇ ಸುಸಜ್ಜಿತ ಡಾಂಬರು ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ,” ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಶಿಡ್ಲಘಟ್ಟ-ಚೀಮಂಗಲ ಮುಖ್ಯ ರಸ್ತೆಯಿಂದ ನಾರಾಯಣದಾಸರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಯನ್ನು ಸ್ಥಳೀಯರೊಂದಿಗೆ ವೀಕ್ಷಿಸಿ ಅವರು ಮಾತನಾಡಿದರು. ಈ ಕಾಮಗಾರಿಗಾಗಿ ಸರ್ಕಾರದಿಂದ 70 ಲಕ್ಷ ರೂ. ಅನುದಾನ ಮಂಜೂರು ಮಾಡಿಸಲಾಗಿದೆ.
“ಈ ರಸ್ತೆ ನಿರ್ಮಾಣವಾಗುತ್ತಿರುವುದು ಜನರ ತೆರಿಗೆ ಹಣದಿಂದ. ಹೀಗಾಗಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಅಧಿಕಾರಿಗಳಿಗಿಂತ ಹೆಚ್ಚಾಗಿ ಗ್ರಾಮಸ್ಥರೇ ನಿಗಾ ವಹಿಸಬೇಕು. ಒಂದು ವೇಳೆ ಡಾಂಬರೀಕರಣದಲ್ಲಿ ಅಥವಾ ರಸ್ತೆ ಅಗಲೀಕರಣದಲ್ಲಿ ಗುಣಮಟ್ಟದ ಕೊರತೆ ಕಂಡುಬಂದಲ್ಲಿ ತಕ್ಷಣವೇ ನನ್ನ ಗಮನಕ್ಕೆ ಅಥವಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತನ್ನಿ,” ಎಂದು ಶಾಸಕರು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಬಹಳಷ್ಟು ವರ್ಷಗಳ ಹಿಂದೆ ಹಾಕಲಾಗಿದ್ದ ಡಾಂಬರು ಸಂಪೂರ್ಣ ಕಿತ್ತುಹೋಗಿ ರಸ್ತೆ ಸಂಚಾರಕ್ಕೆ ಸಂಚಕಾರವಾಗಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಶಾಸಕರು, ನಿಗದಿತ ಸಮಯದೊಳಗೆ ಹಾಗೂ ಗುಣಮಟ್ಟದೊಂದಿಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ತಾದೂರು ರಘು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಶಾಸಕರೊಂದಿಗೆ ಗ್ರಾಮದ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿದರು.








