
Sidlaghatta : ಜನರ ನಾಡಿಮಿಡಿತವನ್ನು ಅರ್ಥೈಸಿ ಹೋರಾಟ ಮನೋಭಾವವನ್ನು ರೂಢಿಸಿಕೊಂಡಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರು ಇಂದಿನ ಯುವಜನತೆಗೆ ಆದರ್ಶವಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.
ನಗರದ ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ಗುರುವಾರ ಉಪಾಧ್ಯಾಯರ 109ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, “ಪಂಡಿತ್ ಉಪಾಧ್ಯಾಯರು ಭಾರತೀಯ ಜನಸಂಘದ ಪ್ರಮುಖ ನಾಯಕರಾಗಿದ್ದು, ಏಕಾತ್ಮ ಮಾನವತಾವಾದ ತತ್ವವನ್ನು ಪ್ರಸ್ತಾಪಿಸಿದರು. ಸಾಮ್ಯವಾದ ಹಾಗೂ ಬಂಡವಾಳಶಾಹಿ ತತ್ವಗಳನ್ನು ವಿಮರ್ಶಿಸಿ, ಅದರ ಬದಲಿಗೆ ಪ್ರಕೃತಿ ಮತ್ತು ಸೃಷ್ಟಿಯ ನಿಯಮಗಳಿಗೆ ಹೊಂದುವ ಮಾರ್ಗಗಳನ್ನು ಸೂಚಿಸಿದ್ದರು. ಸರಳ ಜೀವನ ನಡೆಸಿದ ಅವರು ಸಮಾಜ ಸೇವೆ, ಜನಪರ ಕಾಳಜಿ, ಜನರಿಗಾಗಿ ದುಡಿಯುವ ಮೂಲಕ ಅತ್ಯುತ್ತಮ ಸೇವೆ ಸಲ್ಲಿಸಿದರು. ಯುವಕರು ಅವರ ಆದರ್ಶವನ್ನು ನೆನೆದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಸಾಹಿತಿ ಡಾ. ಎಸ್.ಎಲ್. ಬೈರಪ್ಪ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನೂ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಮಾಜಿ ನಗರಸಭೆ ಅಧ್ಯಕ್ಷ ಸುರೇಂದ್ರಗೌಡ, ಸದಸ್ಯ ನಾರಾಯಣಸ್ವಾಮಿ, ರೂಪಸಿ ರಮೇಶ್, ನರೇಶ್ ಸೇರಿದಂತೆ ಅನೇಕರಿದ್ದರು.