Sidlaghatta : ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ-234ರ ವೀರಾಪುರ ಬಳಿಯ ರೈಲ್ವೆ ಕೆಳಸೇತುವೆಯಲ್ಲಿ ಕಬ್ಬಿಣದ ಸರಳುಗಳು ಕಿತ್ತು ಬಂದಿದ್ದು ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ರೈಲ್ವೆ ಕೆಳಸೇತುವೆಯಲ್ಲಿ ನೀರು ಹರಿದು ಹೋಗಲು ಅಳವಡಿಸಿರುವ ಕಬ್ಬಿಣದ ಸರಳುಗಳ ವೆಲ್ಡಿಂಗ್ ಕಿತ್ತು ಬಂದಿದ್ದು ಸರಳೊಂದು ಮೇಲ್ಮುಖವಾಗಿ ಮೇಲಕ್ಕೆ ಎದ್ದಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಕಳೆದ ಐದಾರು ತಿಂಗಳಲ್ಲಿ ನಾಲ್ಕು ಬಾರಿ ವೆಲ್ಡಿಂಗ್ ಮಾಡಿದ್ದರೂ ಪದೇ ಪದೇ ಕಿತ್ತು ಬಂದು ಹಲವು ಬಾರಿ ಸಣ್ಣ ಪುಟ್ಟ ಅಪಘಾತಗಳು ನಡೆದಿದ್ದವು.
ಕೆಳಸೇತುವೆಯ ಆಸುಪಾಸಿನ ವೀರಾಪುರ, ತಲದುಮ್ಮನಹಳ್ಳಿಯ ಗ್ರಾಮಸ್ಥರು ಕೆಳಸೇತುವೆಯಲ್ಲಿನ ಕಬ್ಬಿಣದ ಸರಳುಗಳು ಪದೇ ಪದೇ ಕಿತ್ತು ಬರುತ್ತಿದ್ದು ಶಾಶ್ವತವಾಗಿ ದುರಸ್ತಿ ಕಾರ್ಯ ಮಾಡಿ ಎಂದು ರೈಲ್ವೇ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ರಸ್ತೆ ಬಂದ್ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು.
ಈ ಹಿನ್ನಲೆಯಲ್ಲಿ ಸಿಪಿಐ ಆನಂದ್ ಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕೋರಿದ್ದರು. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರೊಂದಿಗೆ ಚರ್ಚಿಸಿದರು.
ನಂತರ ರೈಲ್ವೆ ಇಲಾಖೆಯ ಎಂಜಿನಿಯರ್ ಗಳೊಂದಿಗೆ ಕರೆ ಮಾಡಿ ಮಾತನಾಡಿ ಸಮಸ್ಯೆಯನ್ನು ವಿವರಿಸಿದರಲ್ಲದೆ ಶಾಶ್ವತವಾಗಿ ದುರಸ್ತಿ ಮಾಡಲು ಮನವಿ ಮಾಡಿದರು. ಎರಡು ಮೂರು ದಿನದೊಳಗೆ ಸ್ಥಳಕ್ಕೆ ರೈಲ್ವೆ ಇಲಾಖೆ ಎಂಜಿನಿಯರ್ ಗಳು ಭೇಟಿ ನೀಡಿ ಪರಿಶೀಲಿಸಿ ಶಾಶ್ವತ ದುರಸ್ತಿ ಕಾರ್ಯ ಮಾಡುವ ಭರವಸೆ ನೀಡಿದರು.
ಸಿಪಿಐ ಆನಂದ್ ಕುಮಾರ್, ಗ್ರಾಮಾಂತರ ಠಾಣೆ ಎಸ್ ಐ ಸುನಿಲ್ ಕುಮಾರ್, ರೈತ ಸಂಘದ ವೀರಾಪುರ ಮುನಿನಂಜಪ್ಪ ಸೇರಿದಂತೆ ವೀರಾಪುರ, ತಲದುಮ್ಮನಹಳ್ಳಿ ಗ್ರಾಮಸ್ಥರು ಸ್ಥಳದಲ್ಲಿದ್ದರು.








