S Devaganahalli, Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿಯ ಪ್ರಸಿದ್ಧ ರಾಮಸಮುದ್ರ ಕೆರೆ ಬುಧವಾರ ಕೋಡಿ ಹರಿದು ಉಕ್ಕಿ ಹರಿಯಿತು. ಈ ಕೆರೆ ಶಿಡ್ಲಘಟ್ಟ ತಾಲ್ಲೂಕಿನ ಅತಿದೊಡ್ಡ ಕೆರೆಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಎರಡನೇ ಅತಿದೊಡ್ಡ ಕೆರೆ ಎನ್ನಿಸಿಕೊಂಡಿದೆ.
ಮೈಸೂರು ಸಂಸ್ಥಾನದ ಕಾಲದ ದಿವಾನ ಸರ್ ಮಿರ್ಜಾ ಇಸ್ಮಾಯಿಲ್ ಅವರ ಕಾಲದಲ್ಲಿ, ಸುಮಾರು 130 ವರ್ಷಗಳ ಹಿಂದೆ ನಿರ್ಮಿಸಲಾದ ಈ ಕೆರೆ ಸುಮಾರು 900 ಎಕರೆಯಷ್ಟು ವ್ಯಾಪ್ತಿ ಹೊಂದಿದೆ. ಇದರಲ್ಲಿ 800 ಎಕರೆಯಷ್ಟು ಶಿಡ್ಲಘಟ್ಟ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಾಗೂ ಉಳಿದ 100 ಎಕರೆಯಷ್ಟು ಚಿಕ್ಕಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇದೆ.
ಇತ್ತೀಚಿನ ಭಾರಿ ಮಳೆಯಿಂದ ಕೆರೆ ಉಕ್ಕಿ ಹರಿಯುತ್ತಿದ್ದು, ಬೋಯನಹಳ್ಳಿ–ಕೂತನಹಳ್ಳಿ–ಪೆರೇಸಂದ್ರ ಮಾರ್ಗದ ರಸ್ತೆ ನೀರಿನಲ್ಲಿ ಮುಳುಗಿದೆ, ಇದರಿಂದ ಹಲವು ಹಳ್ಳಿಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಎಸ್.ಗುಂಡ್ಲಹಳ್ಳಿ, ಎರ್ರನಾಗೇನಹಳ್ಳಿ, ಕೊಂಡಪ್ಪಗಾರಹಳ್ಳಿ, ನಳಪ್ಪನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಸಂಚಾರದಲ್ಲಿ ತೊಂದರೆ ಉಂಟಾಗಿದೆ.
“ಪ್ರತಿದಿನ ಟೊಮೆಟೋ, ತರಕಾರಿ, ಹೂವು ಮುಂತಾದ ರೈತ ಉತ್ಪನ್ನಗಳನ್ನು ಸಾಗಿಸಲು ಬಳಸುವ ಈ ದಾರಿ ಈಗ ಸಂಪೂರ್ಣ ಮುಚ್ಚಿದೆ. ಶಾಶ್ವತ ಪರಿಹಾರವಾಗಿ ಸೇತುವೆ ನಿರ್ಮಿಸಬೇಕು,” ಎಂದು ಸ್ಥಳೀಯರು ಬೇಡಿಕೊಂಡಿದ್ದಾರೆ.
ಇದೇ ವೇಳೆ ತಾಲ್ಲೂಕಿನ ಹಳೇಹಳ್ಳಿ ಕೆರೆಯೂ ಮಳೆಯಿಂದ ಕೋಡಿ ಹರಿಯುತ್ತಿದ್ದು, ತಲಕಾಯಲಬೆಟ್ಟದ ನೀರು ಕರಿಯಪ್ಪನಹಳ್ಳಿ ಮತ್ತು ಚೇಳೂರಿನ ಮೂಲಕ ಕಂದುಕೂರು ಕೆರೆಗೆ ಸೇರುತ್ತಿದೆ. “ಆರು ವರ್ಷಗಳ ಬಳಿಕ ಮತ್ತೆ ಹಳೇಹಳ್ಳಿ ಕೆರೆ ಕೋಡಿ ಹರಿದಿರುವುದು ಸಂತಸದ ಸಂಗತಿ,” ಎಂದು ಗ್ರಾಮಸ್ಥ ಎಚ್.ಬಿ. ಕೃಷ್ಣಾ ರೆಡ್ಡಿ ಹೇಳಿದರು.







