Sidlaghatta : “ರೇಷ್ಮೆ ನೂಲು ಬಿಚ್ಚಾಣಿಕೆಯ ವಿವಿಧ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಾಗಬೇಕು. ಕಡಿಮೆ ಖರ್ಚು ಮತ್ತು ಕಡಿಮೆ ಬಂಡವಾಳದಲ್ಲಿ ಹೆಚ್ಚು ಉತ್ಪಾದನೆ ಹಾಗೂ ಲಾಭ ಪಡೆಯುವತ್ತ ಉದ್ಯಮಿಗಳು ಚಿಂತನೆ ನಡೆಸಬೇಕು,” ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ ತಿಳಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ವಿ ಕೇರ್ ಸೊಸೈಟಿ ಸಹಯೋಗದಲ್ಲಿ ನಗರದ ಶ್ರೀರಾಮ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ರ್‍ಯಾಂಪ್ (RAMP) ಯೋಜನೆಯಡಿ ‘ಎಂಎಸ್‌ಎಂಇ ಕ್ಲಸ್ಟರ್ ಟೆಕ್ನಾಲಜಿ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಮತ್ತು ಈಗಾಗಲೇ ಉದ್ಯಮದಲ್ಲಿ ತೊಡಗಿರುವವರಿಗೆ ಸರ್ಕಾರವು ಬಂಡವಾಳ, ತಾಂತ್ರಿಕ ನೆರವು ಹಾಗೂ ತರಬೇತಿ ರೂಪದಲ್ಲಿ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಆಶಿಸಿದರು.
ವಿದೇಶಿ ಮಾರುಕಟ್ಟೆ ಮಾದರಿ ಅಳವಡಿಸಿಕೊಳ್ಳಿ: ವಿ ಕೇರ್ ಸೊಸೈಟಿಯ ಸಂಸ್ಥಾಪಕಿ ಅನಿತಾರಾವ್ ಮಾತನಾಡಿ, “ನಮ್ಮಲ್ಲಿ ತಯಾರಾಗುವ ರೇಷ್ಮೆ ನೂಲನ್ನು ಬಳಸಿ ವಿದೇಶಗಳಲ್ಲಿ ಅತ್ಯುನ್ನತ ಗುಣಮಟ್ಟದ ಗೃಹಬಳಕೆಯ ಉತ್ಪನ್ನಗಳನ್ನು ತಯಾರಿಸಿ ಮೌಲ್ಯವರ್ಧನೆ ಮಾಡಲಾಗುತ್ತದೆ. ಅಂತಹ ಆಲೋಚನೆ ಮತ್ತು ಮಾರುಕಟ್ಟೆ ತಂತ್ರಗಳನ್ನು ನಮ್ಮ ಉದ್ಯಮಿಗಳು ಅಳವಡಿಸಿಕೊಂಡರೆ ರೇಷ್ಮೆ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಬೆಲೆ ಸಿಗಲು ಸಾಧ್ಯ,” ಎಂದರು.
ಸಂವಾದದಲ್ಲಿ ಎಂಎಸ್‌ಎಂಇ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರದ ಸಬ್ಸಿಡಿಗಳು, ಸಾಲ ಸೌಲಭ್ಯ, ಮಾರುಕಟ್ಟೆ ಸಂಪರ್ಕ ಮತ್ತು ಕಾನೂನು ಸಮಸ್ಯೆಗಳಿಗೆ ಪರಿಹಾರಗಳ ಕುರಿತು ತಜ್ಞರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಮಹೇಶ್, ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಎನ್.ಉಮೇಶ್, ರೇಷ್ಮೆ ಬಿಚ್ಚಾಣಿಕೆದಾರರ ಸಂಘದ ಅಧ್ಯಕ್ಷ ಅನ್ಸರ್‌ಖಾನ್ ಸೇರಿದಂತೆ ರೇಷ್ಮೆ ಉದ್ಯಮದ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.








