ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು ಶಾಸಕ ವಿ. ಮುನಿಯಪ್ಪ.
ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟವೆಂದು ಪ್ರತಿಬಿಂಬಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎದುರಿಸುತ್ತಿರುವ ಪರೀಕ್ಷಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಕೊರೊನಾ ಸೋಂಕಿನ ಪ್ರಭಾವದಿಂದ ಪರೀಕ್ಷಾರ್ಥಿಗಳನ್ನು ರಕ್ಷಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಅಧಿಕಾರಿಗಳು ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಪರೀಕ್ಷಾರ್ಥಿಗಳಿಗೆ ನಿರ್ಭೀತಿಯಿಂದ ಪರೀಕ್ಷೆ ಬರೆಯಲು ವಾತಾವರಣವನ್ನು ನಿರ್ಮಿಸಬೇಕೆಂದು ತಾಕೀತು ಮಾಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಪರೀಕ್ಷಾರ್ಥಿಗಳು ಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಅವಕಾಶ ಒದಗಿಸಬೇಕು. ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳಂತೆ ಪರೀಕ್ಷೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿ ಯಾವುದೇ ರೀತಿಯಲ್ಲಿ ಲೋಪವಾಗದಂತೆ ಎಚ್ಚರ ಮತ್ತು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕೆಂದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜಿನೇಯ ಮಾತನಾಡಿ, ಜುಲೈ 19 ಮತ್ತು 22 ರಂದು ನಡೆಯುವ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಯನ್ನು ಒಟ್ಟು 2425 ವಿದ್ಯಾರ್ಥಿಗಳು ತಾಲ್ಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ಪರೀಕ್ಷಾ ಕಾರ್ಯಕ್ಕೆ ಪ್ರತಿ ಕೇಂದ್ರಕ್ಕೂ ಒಬ್ಬ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಪರೀಕ್ಷಾ ಕಾರ್ಯಕ್ಕೆ 15 ಜನ ಸ್ಥಾನಿಕ ಜಾಗೃತ ದಳ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ, ಪ್ರಶ್ನೆ ಪತ್ರಿಕೆಯನ್ನು ವಿತರಿಸುವ ಮತ್ತು ಉತ್ತರ ಪತ್ರಿಕೆಯನ್ನು ಹಿಂಪಡೆಯುವ ಮಾರ್ಗಾಧಿಕಾರಿಯಾಗಿ 06 ಜನರನ್ನು ನೇಮಕ ಮಾಡಲಾಗಿದೆ, 275 ಜನ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ, ಪ್ರತಿ ಕೊಠಡಿಗೆ 12 ವಿದ್ಯಾರ್ಥಿಗಳಂತೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಲ್ಲಾ ಕೇಂದ್ರಗಳಲ್ಲೂ ಮೂಲಭೂತ ಸೌಕರ್ಯಗಳಾದ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಶಾಸಕರು ಬಳಿಕ ನಗರದ ಸರ್ಕಾರಿ ಪ್ರೌಢಶಾಲೆ ಹಾಗೂ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಶಾಲೆಯಲ್ಲಿ ತೆರೆದಿರುವ ಪರೀಕ್ಷಾ ಕೇಂದ್ರವನ್ನು ವೀಕ್ಷಣೆ ಮಾಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್, ನೋಡಲ್ ಅಧಿಕಾರಿ ಭಾಸ್ಕರಗೌಡ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi