Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಿಜಿಎಸ್ ಶಾಲೆಯ (BGS Public Schools) ವಿದ್ಯಾರ್ಥಿನಿ ಜಿ.ಹರ್ಷಿತಾ (G Harshita) SSLC ಯಲ್ಲಿ 625 ಕ್ಕೆ 625 ಅಂಕಗಳಿಸುವ ಮೂಲಕ Topper ಆಗಿ ಹೊರಹೊಮ್ಮಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ನಗರದ ಕಾಮಾಟಿಗರ ಪೇಟೆಯ ವಿ.ಎಲ್.ಗಣೇಶ್ ಹಾಗೂ ಎಚ್.ಎಸ್.ಅನುರಾಧ ದಂಪತಿಯ ಪುತ್ರಿ ಜಿ.ಹರ್ಷಿತ ಈ ಭಾರಿಯ ಎಸ್ಸೆಸ್ಸೆಲ್ಸಿಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ತಾಲ್ಲೂಕಿಗೆ ಮೊದಲಿಗಳಾಗಿದ್ದಾಳೆ.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಗೇಟ್ ಬಿಜಿಎಸ್ ಶಾಲೆಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿಯು 625 ಕ್ಕೆ 625 ಅಂಕಗಳಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಐವರಲ್ಲಿ ಒಬ್ಬರಾದರೆ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ.
ಬಿಜಿಎಸ್ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿಯ ಪರವಾಗಿ ಪ್ರಿನ್ಸಿಪಾಲ್ ಮಹದೇವ್, ಶಿಕ್ಷಕರು ಸೇರಿ ವಿದ್ಯಾರ್ಥಿ ಹಾಗೂ ಆಕೆಯ ಪೋಷಕರನ್ನ ಶಾಲೆಗೆ ಕರೆಸಿ ಪುರಸ್ಕರಿಸಿದ್ದು ಇತರೆ ವಿದ್ಯಾರ್ಥಿಗಳಿಗೆ ಅದು ಪ್ರೇರಣೆಯಾಯಿತು.
ಕೆಎಂಎಫ್‌ನ ನಿರ್ದೇಶಕ ಆರ್.ಶ್ರೀನಿವಾಸ್ ಅವರು ವಿದ್ಯಾರ್ಥಿನಿಯನ್ನು ಸನ್ಮಾನಿಸಿ ನಂದಿನಿಯ ಸಿಹಿ ಉತ್ಪನ್ನಗಳನ್ನು ಬಹುಮಾನವಾಗಿ ನೀಡಿ ಸತ್ಕರಿಸಿದರು. ಈ ಸಾಧನೆಗೆ ಪ್ರೋತ್ಸಾಹ ನೀಡಿದ ಹೆತ್ತವರು, ಶಿಕ್ಷಕರಿಗೂ ವಿದ್ಯಾರ್ಥಿನಿ ಹರ್ಷಿತ ಸಿಹಿ ತಿನ್ನಿಸಿ ಸಂಭ್ರಮವನ್ನು ಹಂಚಿಕೊಂಡರು.
ಬಿಜಿಎಸ್ ಶಾಲೆಯ ಪ್ರಿನ್ಸಿಪಾಲ್ ಮಹದೇವ್, ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್, ವಿದ್ಯಾರ್ಥಿನಿ ಜಿ.ಹರ್ಷಿತ, ತಂದೆ ವಿ.ಎಲ್.ಗಣೇಶ್, ತಾಯಿ ಎಚ್.ಎಸ್.ಅನುರಾಧ ಹಾಗೂ ಶಿಕ್ಷಕರು ಹಾಜರಿದ್ದರು.