Sidlaghatta : ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ಕೂಡ ಬೀದಿ ನಾಯಿಗಳ ನಿಯಂತ್ರಣ ಮತ್ತು ನಾಯಿಗಳಿಂದ ಮಕ್ಕಳ ಮೇಲೆ ದಾಳಿ ನಿಯಂತ್ರಿಸುವಲ್ಲಿ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಡಿಸಿ ಪಿ.ಎನ್.ರವೀಂದ್ರ ಕೋರಿದರು.
ನಗರೋತ್ಥಾನ ಹಂತ-4ರಲ್ಲಿನ ಅನುದಾನದಲ್ಲಿ ನಗರದಲ್ಲಿ ನಿರ್ಮಿಸಿರುವ ಸಿಮೆಂಟ್ ರಸ್ತೆ ಕಾಮಗಾರಿಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೀದಿ ನಾಯಿಗಳಿಗೆ ಹಿಂಸೆ ಕೊಡಬಾರದು ಎನ್ನುವ ಪ್ರಾಣಿ ದಯಾ ಸಂಘ, ನ್ಯಾಯಾಲಯದ ಕಾನೂನನ್ನು ಒಂದು ಕಡೆ, ನಾಗರಿಕರು, ಮಕ್ಕಳು, ಮುದುಕರ ಹಿತ ರಕ್ಷಣೆ ಮತ್ತೊಂದು ಕಡೆ. ಈ ಎರಡೂ ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಂಡು ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಈಗಾಗಲೆ ಅಗತ್ಯ ಸಿದ್ದತೆಗಳನ್ನು ಕೈಗೊಂಡಿದೆ ಎಂದರು.
ಬೀದಿ ನಾಯಿಗಳನ್ನು ರಕ್ಷಸಿ ಆರೈಕೆ ಮಾಡಲು ಸೂಕ್ತ ಜಾಗ ನಿಗಧಿಗಾಗಿ ನಗರಸಭೆಯಿಂದ ಪ್ರಸ್ತಾವನೆ ಬಂದಿದ್ದು ಅದನ್ನು ಪುರಸ್ಕರಿಸುವುದಾಗಿ ತಿಳಿಸಿದರು.
ಬೀದಿಗಳಲ್ಲಿ ಅಡ್ಡಾಡುವ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿ ಕೆಲ ಕಾಲ ಆರೈಕೆ ಮಾಡಿ ಬಿಡಲಾಗುತ್ತದೆ. ಇದರಿಂದ ಬೀದಿ ನಾಯಿಗಳ ಸಂತತಿ ತಂತಾನೆ ಕಡಿಮೆಯಾಗಿ ಅವುಗಳ ಹಾವಳಿ ಕ್ರಮೇಣ ಇಲ್ಲವಾಗುತ್ತದೆ ಎಂದರು.
ನಗರೋತ್ಥಾನ ಹಂತ-4ರಲ್ಲಿ 12 ಕೋಟಿ ರೂಪಾಯಿಗಳ ಅನುದಾನದಲ್ಲಿ ಈಗಾಗಲೆ 7 ಕೋಟಿ ರೂಗಳ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಮುಗಿದಿದ್ದು ಇನ್ನುಳಿದ 5 ಕೋಟಿ ರೂ ಅನುದಾನದಲ್ಲಿ ಅನುಮೋದನೆಗೊಂಡ ಕಾಮಗಾರಿಗಳು ನಡೆಯಲಿವೆ ಎಂದು ವಿವರಿಸಿದರು.
ನಾಗರಿಕರು ತಮ್ಮ ಆಸುಪಾಸು ಅಭಿವೃದ್ದಿ, ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳು ನಡೆಯುವಾಗ ಅದರ ಗುಣಮಟ್ಟದ ಬಗ್ಗೆ ನಿಗಾವಹಿಸಬೇಕು. ಸರ್ಕಾರದ ದುಡ್ಡು, ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ನಮಗೇಕೆ ಎನ್ನುವ ಉದಾಸೀನ ಬೇಡ ಎಂದರು.
ಸಾರ್ವಜನಿಕರ ತೆರಿಗೆ ಹಣದಿಂದಲೆ ಈ ಎಲ್ಲ ಕಾಮಗಾರಿಗಳನ್ನು ನಡೆಸಲಿದ್ದು ಕಾಮಗಾರಿ ನಡೆಹಯುವುದು, ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ನಿಮ್ಮ ಪಾತ್ರವೂ ಇರಬೇಕಾಗುತ್ತದೆ ಎಂದು ಕೋರಿದರು.
ಶಿಡ್ಲಘಟ್ಟ ನಗರಸಭೆಯಲ್ಲಿ ಖಾತಾ ಆಂದೋಲನ ನಿಧಾನಗತಿಯಲ್ಲಿ ಸಾಗುತ್ತಿದೆ. ಇಲ್ಲಿ ಬಹುತೇಕ ನಿವೇಶನ, ಮನೆ ಇನ್ನಿತರೆ ಆಸ್ತಿಗಳಿಗೆ ನೋಂದಾಯಿತ ಸೂಕ್ತ ದಾಖಲೆಗಳು ಇಲ್ಲ. ಬಹುತೇಕ ಆಸ್ತಿಗಳಿಗೆ ಒಪ್ಪಂದ ಪತ್ರ ಮಾತ್ರ ಇದೆ. ಈ ಕಾರಣಕ್ಕೆ ಖಾತಾ ಅಭಿಯಾನ ನಿಧಾನವಾಗುತ್ತಿದೆ ಎಂದರು.
ಶಿಡ್ಲಘಟ್ಟ ನಗರದಲ್ಲಿ ಬಹುತೇಕ ನಿವೇಶನಗಳು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮೋದನೆಗೊಂಡಿಲ್ಲ. ಜಮೀನಿನ ಮಾಲೀಕರು ನಿವೇಶನಗಳನ್ನು ವಿಂಗಡಣೆ ಮಾಡಿ ನೋಂದಾಯಿಸಿ ಬಿಟ್ಟಿದ್ದಾರೆ. ಇಂತಹ ನಿವೇಶನಗಳಿಗೆ ಇ ಖಾತೆ ನೀಡಲಾಗುವುದಿಲ್ಲ ಎಂದರು.
ಖಾತಾಗೆ ಬಂದ ಅರ್ಜಿಗಳನ್ನು ಸೂಕ್ತ ಎಲ್ಲ ದಾಖಲೆಗಳು ಇರುವ ಮತ್ತು ಸೂಕ್ತ ದಾಖಲೆಗಳು ಇಲ್ಲದ ಅರ್ಜಿಗಳನ್ನಾಗಿ ಪ್ರತ್ಯೇಕಿಸುವ ಕೆಲಸ ನಡೆದಿದೆ. ಮೊದಲು ಸೂಕ್ತ ದಾಖಲೆಗಳೆಲ್ಲವೂ ಇರುವ ಆಸ್ತಿಗೆ ಇ-ಖಾತೆ ಮಾಡಿ ಸೂಕ್ತ ದಾಖಲೆಗಳು ಇಲ್ಲದ ಆಸ್ತಿಗಳ ವಿವರಗಳನ್ನು ಸರಕಾರಕ್ಕೆ ಬರೆದು ಅವರಿಂದ ಸೂಕ್ತ ಸಲಹೆ ಸೂಚನೆ ಕೋರಿ ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮವಹಿಸಲಿದ್ದೇವೆ ಎಂದು ಡಿಸಿ ಪಿ.ಎನ್.ರವೀಂದ್ರ ತಿಳಿಸಿದರು.
ನಗರೋತ್ಥಾನ ಯೋಜನೆಯಡಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಿಸಲು ಆಗಮಿಸಿದ್ದ ಡಿಸಿ ಪಿ.ಎನ್.ರವೀಂದ್ರ ಅವರು, ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ 2000 ರೂ ಜಮೆ ಆಗುತ್ತಿದೆಯಾ? ಎಂದು ಷರಾಫ್ ರಸ್ತೆ ತಿರುವಿನಲ್ಲಿನ ಮಹಿಳೆಯರನ್ನು ಪ್ರಶ್ನಿಸಿದರು.
ಹಾಗೆಯೆ ಭಾಗ್ಯ ಲಕ್ಷ್ಮಿ ಯೋಜನೆಯಡಿ ವಿದ್ಯುತ್ ಬಿಲ್ಲ ಉಚಿತ ಆಗಿದೆಯಾ? ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿದಾಗ ಅವರು ಹೌದು ಹೌದು ಎಂದರು.
ನಗರಸಭೆ ಆಯುಕ್ತೆ ಜಿ.ಅಮೃತ, ಸಿಬ್ಬಂದಿ, ಗುತ್ತಿಗೆದಾರ ಕೆ.ಬಿ.ಮಂಜುನಾಥ್, ಮುರಳಿ ಹಾಜರಿದ್ದರು.
For Daily Updates WhatsApp ‘HI’ to 7406303366









