Sidlaghatta : ವಿದ್ಯಾರ್ಥಿಗಳು ತಮ್ಮ ಊರಿನ ಇತಿಹಾಸವನ್ನು ಅರಿತುಕೊಳ್ಳಬೇಕು, ಸುತ್ತಮುತ್ತಲಿನ ಸಾಧಕರ ಸಾಧನೆಯನ್ನು ಓದಿ ತಿಳಿಯಬೇಕು. ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡುವುದು, ಬೆಳಗಿನ ಜಾವ ಬೇಗ ಎದ್ದು ಅಧ್ಯಯನ ಮಾಡುವುದರಿಂದ ಸ್ಮರಣಾಶಕ್ತಿ ವೃದ್ಧಿಯಾಗುತ್ತದೆ ಎಂದು ನಿವೃತ್ತ ಮನೋವೈದ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಡಾ. ಸಿ.ಆರ್. ಚಂದ್ರಶೇಖರ್ ತಿಳಿಸಿದರು.
ನಗರದ ಶ್ರೀ ಶಾರದಾ ಎಜುಕೇಷನಲ್ ಟ್ರಸ್ಟ್ ನ ಎ.ಆರ್.ಎಂ. ಪಿಯು ಕಾಲೇಜಿನ ವಿನ್ನರ್ಸ್ ಬ್ರೈಟ್ ಅಕಾಡೆಮಿ ವತಿಯಿಂದ ಶನಿವಾರ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ “ಶ್ರೇಯೋಸ್ತು–2026” ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಮೆದುಳಿಗೆ ನಿರಂತರವಾಗಿ ಕೆಲಸ ನೀಡಬೇಕು. ಸ್ಮರಣೆ ಮತ್ತು ಪುನಃಸ್ಮರಣೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಬಹಳ ಸಹಕಾರಿಯಾಗುತ್ತದೆ. ಮಾನವನ ಮೆದುಳಿನಲ್ಲಿ ಕೋಟ್ಯಂತರ ನರಕೋಶಗಳಿದ್ದು, ಬಲ ಮತ್ತು ಎಡಭಾಗದ ಮೆದುಳಿನ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಬೆಳಗಿನ ವೇಳೆಯಲ್ಲಿ ಅಧ್ಯಯನ ಮಾಡಿದರೆ ಏಕಾಗ್ರತೆ ಹಾಗೂ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪವರ್ ಪಾಯಿಂಟ್ (ಪಿಪಿಟಿ) ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಅಧ್ಯಯನ, ಸ್ಮರಣಾಶಕ್ತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಹಲವು ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ಟರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.
2026ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಡಾ. ಕೆ. ಮಧುಸೂದನ್ ಉದ್ಘಾಟಿಸಿದರು. ಹೈಕೋರ್ಟ್ ವಕೀಲ ಎ. ಹರಿರಾಮ್ ಮಾತನಾಡಿದರು.
ಶಾರದಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎ.ಆರ್. ಮುನಿರತ್ನಂ, ಕಾರ್ಯದರ್ಶಿ ಎ.ಎಂ. ಶ್ರೀಕಾಂತ್, ಆಡಳಿತಾಧಿಕಾರಿ ವಂದನಾ, ಎ.ಆರ್.ಎಂ. ಪಿಯು ಕಾಲೇಜಿನ ಪ್ರಾಂಶುಪಾಲ ಕೆ. ಮೂರ್ತಿ ಸಾಮ್ರಾಟ್, ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸಾಹಿತಿ ಪಾ.ಮು.ಚಲಪತಿಗೌಡ, ವಿದ್ಯಾಜ್ಯೋತಿ ಪಿ.ಯು ಕಾಲೇಜು ಪ್ರಾಂಶುಪಾಲ ಟಿ.ವೈ.ಮುನಿರಾಜು, ಉಪನ್ಯಾಸಕರಾದ ದೇವರಾಜ್, ರವಿ, ನಾಗೇಶ್ ಮೌರ್ಯ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.
In English: Retired psychiatry professor Dr. C.R. Chandrashekar delivered a motivational lecture on study habits and memory-building at the “Shreyostu-2026” event organized by Winners Bright Academy at ARM PU College, Sidlaghatta. Top PUC scorers of 2026 were also felicitated at the event held at Balaji Convention Hall.








