Sidlaghatta : ಶಿಡ್ಲಘಟ್ಟ ತಾಲ್ಲೂಕು SVEEP Committee ವತಿಯಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಮುನಿರಾಜ ಅವರ ನೇತೃತ್ವದಲ್ಲಿ ಶನಿವಾರ ನಗರದ ಶ್ರೀ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ಅವರು, ಹದಿನೆಂಟು ವರ್ಷ ಮೇಲ್ಪಟ್ಟ ಜನರು ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂದರು.
ಪ್ರತಿಯೊಬ್ಬರಿಗೂ ಮತದಾನದ ಮಹತ್ವದ ಬಗ್ಗೆ ಅರಿವಿರಬೇಕು. ನಾವೆಲ್ಲರೂ ಹೆಚ್ಚಿನ ಶ್ರಮವಹಿಸಿ ನಮ್ಮ ಪರಿಚಿತರು, ಬಂಧುಗಳು ಹಾಗೂ ಸ್ನೇಹಿತರಿಗೆ ಮತದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಬೇಕು ಎಂದರು.
ಮತದಾನ ಹಾಕುವುದು ನಮ್ಮ ನಿಮ್ಮೆಲ್ಲರ ಹಕ್ಕು. ಈ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ಮನವಿ ಮಾಡಿದರು.
ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯಬೇಕು. ಮತದಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ದಿನವೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಮತದಾನ ಜಾಗೃತಿ ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಪ್ರಾಂಶುಪಾಲ ಡಾ. ಕೆ. ಮೂರ್ತಿ ಸಾಮ್ರಾಟ್ ಮಾತನಾಡಿ, ಮತದಾನ ಬಗ್ಗೆ ಅರಿವು ಮೂಡಿಸುವ, ವಿದ್ಯಾರ್ಥಿಗಳು ರೂಪಿಸಿರುವ ವಿಡಿಯೋವನ್ನು ಬಿಡುಗಡೆ ಮಾಡಿ ಮಾತನಾಡಿ, ದೇಶದಲ್ಲಿ ಯಾವುದಾದರು ದೊಡ್ಡ ಬದಲಾವಣೆ ಮಾಡಬೇಕೆಂದರೆ ಅದು ಮತದಾನದಿಂದ ಮಾತ್ರ ಸಾಧ್ಯ. ಸಮಾಜ ಬದಲಾವಣೆಯಾಗಬೇಕು ಎಂದರೆ ನಾವು ನಮ್ಮ ಅಮೂಲ್ಯವಾದ ಮತವನ್ನು ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಸೇವೆ ನೀಡುವ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಘುನಾಥ್, ಶಾರದಾ ಸಂಸ್ಥೆ ಅಧ್ಯಕ್ಷ ಎ. ಆರ್. ಮುನಿರತ್ನಂ, ಕಾರ್ಯದರ್ಶಿ ಶ್ರೀಕಾಂತ್, ನಿವೃತ್ತ ಮುಖ್ಯ ಶಿಕ್ಷಕಿ ವಿಜಯ, ಎ.ಆರ್.ಎಂ.ಪಿಯು ಕಾಲೇಜು ಪ್ರಾಂಶುಪಾಲ ಡಾ.ಮೂರ್ತಿ. ಕೆ. ಸಾಮ್ರಾಟ್, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.