Home News ಮದೀನಾ ಮಸೀದಿಯ ಮುಖಂಡರೊಂದಿಗೆ ತಹಶೀಲ್ದಾರ್ ಸಭೆ

ಮದೀನಾ ಮಸೀದಿಯ ಮುಖಂಡರೊಂದಿಗೆ ತಹಶೀಲ್ದಾರ್ ಸಭೆ

0
sidlaghatta hijab saffron row tahsildar meeting

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಧಾರ್ಮಿಕ ಸೌಹಾರ್ಧತೆಯನ್ನು ಕಾಪಾಡಬೇಕು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಅನಗತ್ಯ ವಿಷಯಗಳಿಗಾಗಿ ಬಲಿಕೊಡದಂತೆ ನಾವೆಲ್ಲಾ ಎಚ್ಚರಿಕೆ ವಹಿಸಬೇಕು. ಸೌಹಾರ್ಧಯುತ ಸಮಾಜಕ್ಕಾಗಿ ಎಲ್ಲಾ ಧಾರ್ಮಿಕ ಮುಖಂಡರೂ ಸಹಕರಿಸಬೇಕು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದರು.

 ನಗರದ ಮದೀನಾ ಮಸೀದಿಯ ಸಭಾಂಗಣದಲ್ಲಿ ಸೋಮವಾರ ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಂತೆ ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ನಡೆಸಿದ ಸಭೆಯಲ್ಲಿ ಅವರು ಧಾರ್ಮಿಕ ಮುಖಂಡರೊಂದಿಗೆ ಮಾತನಾಡಿದರು.

 ಶಿಡ್ಲಘಟ್ಟ ತಾಲ್ಲೂಕು ಶಾಂತಿಪ್ರಿಯವಾದ ತಾಲ್ಲೂಕಾಗಿದ್ದು, ಇದಕ್ಕೆ ಭಂಗ ತರುವ ಯಾವುದೇ ಸಂದರ್ಭ ಸೃಷ್ಟಿಯಾಗದ ಹಾಗೆ ಸಮುದಾಯಗಳು, ಸಂಘಟನೆಗಳು, ಪೋಷಕರು, ಮಸೀದಿಯ ಹಿರಿಯರು, ಶಾಲೆ ಕಾಲೇಜುಗಳ ಮುಖ್ಯಸ್ಥರು ಸಹಕರಿಸಬೇಕು. ಹಿಜಾಬ್-ಕೇಸರಿ ಶಾಲು ಕುರಿತಂತೆ ನ್ಯಾಯಾಲಯ ನೀಡಿರುವ ಆದೇಶ, ಸೂಚನೆಗಳನ್ನು  ಪಾಲಿಸುವುದು ನಮ್ಮ ಕರ್ತವ್ಯವಾಗಿದೆ.

 ಈ ಸಂದರ್ಭದಲ್ಲಿ ಭಾಗವಹಿಸಿದ್ದ ಧಾರ್ಮಿಕ ಮುಖಂಡರು, ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಸೂಚಕ ಉಡುಪುಗಳನ್ನು ಧರಿಸಬಾರದು ಎಂಬ ಕರ್ನಾಟಕ ಹೈಕೋರ್ಟ್ ಆದೇಶದ ಪ್ರತಿಯೊಂದಿಗೆ ಪ್ರತಿಯೊಂದು ಮಸೀದಿಗೂ ಪತ್ರ ಬರೆದು, ಎಲ್ಲರಿಗೂ ವಿಷಯ ಮುಟ್ಟಿಸಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸುವುದಾಗಿ ಹೇಳಿದರು.

 ಸರ್ಕಲ್ ಇನ್ಸ್ ಪೆಕ್ಟರ್ ಧರ್ಮೇಗೌಡ, ಮದೀನಾ ಮಸೀದಿಯ ಕಾರ್ಯದರ್ಶಿ ನಿಸಾರ್ ಅಹಮದ್, ನಿರ್ದೇಶಕ ಎಚ್.ಎಸ್.ಏಜಾಜ್ ಅಹಮದ್, ಅತೀಕುಲ್ಲಾ ಶರೀಫ್, ತಮೀಮ್ ಅನ್ಸಾರಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version