Sidlaghatta, Chikkaballapur District : ಮಹಾಕಾವ್ಯ ರಾಮಾಯಣ ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಮಹರ್ಷಿಯ ಪೂರ್ವಾಶ್ರಮವಾಗಿದ್ದೆಂದು ನಂಬಲಾದ ತಲಕಾಯಲಬೆಟ್ಟದಲ್ಲಿ ಇಂದು ವಿಶೇಷ ಪೂಜೆ, ಸ್ಮರಣಾ ಕಾರ್ಯಕ್ರಮಗಳು ನಡೆಯುತ್ತಿವೆ.
ತಾಲ್ಲೂಕಿನ ಉತ್ತರ ದಿಕ್ಕಿಗೆ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಪಾಪಾಗ್ನಿ ನದಿ ತೀರದ ತಲಕಾಯಲಬೆಟ್ಟವು ವಾಲ್ಮೀಕಿಯವರ ಬಾಲ್ಯ, ಜೀವನ ಮತ್ತು ಮೋಕ್ಷ ಪಡೆದ ಸ್ಥಳವೆಂದು ಪರಿಗಣಿಸಲಾಗಿದೆ. ಈ ಪವಿತ್ರ ಸ್ಥಳದ ಕುರಿತು ಹಿರಿಯರು ಹೇಳುವ ಪ್ರಕಾರ, ವಾಲ್ಮೀಕಿಯ ಪೂರ್ವಜನ್ಮದ ಮುತ್ತುರಾಜನು ಅರಣ್ಯ ಪ್ರದೇಶದಲ್ಲಿ ದರೋಡೆ ಮಾಡುತ್ತಿದ್ದಾಗ ನಾರದ ಮುನಿಗಳ ಉಪದೇಶದಿಂದ ರಾಮನ ಜಪ ಆರಂಭಿಸಿ ತಪಸ್ಸಿಗೆ ತೊಡಗಿದರು.
ಅವರ ಸುತ್ತಲೂ ಬೆಳೆದ ಹುತ್ತದಿಂದ ಹೊರಬಂದು ಮೋಕ್ಷ ಪಡೆದ ಮುತ್ತುರಾಜನು “ವಾಲ್ಮೀಕಿ” ಎಂದ ಹೆಸರಿನಿಂದ ಪ್ರಸಿದ್ಧರಾದರು. ಸಂಸ್ಕೃತದಲ್ಲಿ ‘ವಾಲ್ಮೀಕ’ ಎಂದರೆ ಹುತ್ತ ಎಂಬ ಅರ್ಥವಿದ್ದು, ಅದೇ ಹೆಸರು ಅವರ ತಪಸ್ಸು ಮತ್ತು ಪರಿವರ್ತನೆಯ ಸಂಕೇತವಾಗಿದೆ. ಈ ಸ್ಥಳದ ಪ್ರಾಚೀನತೆ, ಕಥೆಗಳು ಹಾಗೂ ಆಧ್ಯಾತ್ಮಿಕ ಮಹತ್ವ ಇಂದಿಗೂ ಭಕ್ತರ ಮನಸ್ಸಿನಲ್ಲಿ ಭಕ್ತಿ ಮತ್ತು ಕೌತುಕ ಮೂಡಿಸುತ್ತಿವೆ.