Sidlaghatta : Covid ಸೋಂಕು ಈಗ ಶಿಡ್ಲಘಟ್ಟ ತಾಲ್ಲೂಕಿಗೂ ಕಾಲಿಟ್ಟಿದೆ. ತಾಲ್ಲೂಕಿನ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಸೋಂಕು ದೃಢವಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರು, “ತಾಲ್ಲೂಕಿನ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜ್ವರ ಮತ್ತು ನೆಗಡಿ ಇದ್ದ ಕಾರಣ ಅವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಕೋವಿಡ್ ಸೋಂಕು ಇರುವುದು ದೃಢವಾಗಿದೆ. ಆದರೆ ಅವರಿಗೆ ಕೆಮ್ಮು ಅಥವಾ ಉಸಿರಾಟದ ತೊಂದರೆ ಇಲ್ಲದಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ. ಅವರು ಈಗಲೂ ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮನೆಗೆ ಆರೋಗ್ಯ ಸಿಬ್ಬಂದಿಯೊಡನೆ ಭೇಟಿ ನೀಡಿದ್ದೆವು. ಅವರ ಕುಟುಂಬದ ಆರೂ ಮಂದಿ ಆರೋಗ್ಯವಾಗಿದ್ದಾರೆ. ಆ ವೃದ್ಧರು ಮನೆಗೆ ಬಂದ ಮೇಲೆ ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿಕೊಟ್ಟಿದ್ದೇವೆ” ಎಂದು ಹೇಳಿದರು.
“ಗರ್ಭಿಣಿಯರು, 60 ವರ್ಷ ಮೇಲ್ಪಟ್ಟಿರುವ ಸಕ್ಕರೆ ಕಾಯಿಲೆ, ಬಿ.ಪಿ, ಕಿಡ್ನಿ ತೊಂದರೆ ಇರುವವವರು ಹಾಗೂ ಮಕ್ಕಳು ಎಚ್ಚರಿಕೆಯಿಂದ ಇರಬೇಕು. ತೀವ್ರ ಜ್ವರ, ತಲೆ ನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯೂಮೋನಿಯಾ ಮತ್ತು ಆಯಾಸ, ವಾಸನೆ ಮತ್ತು ರುಚಿ ನಷ್ಟ ರೋಗದ ಲಕ್ಷಣಗಳಾಗಿವೆ. ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು. ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು. ವೈಯಕ್ತಿಕ ಸ್ಚಚ್ಛತೆ ಕಾಪಾಡಿಕೊಳ್ಳುವುದು ಮತ್ತು ಸಾಬೂನಿನಿಂದ ಕೈ ತೊಳೆಯಬೇಕು. ಕೆಮ್ಮುವಾಗ ಮತ್ತು ಸೀನುವಾಗ ಎಲ್ಲೆಂದರಲ್ಲಿ ಉಗುಳಬಾರದು. ಉಸಿರಾಟದ ತೊಂದರೆ ಆದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಸುರಕ್ಷಿತವಲ್ಲದ ಕಾಡು ಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬಾರದು” ಎಂದು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಅವರು ಹೇಳಿದರು.
“ಆಗಾಗ್ಗೆ ಸೋಪು ಅಥವಾ ನೀರಿನಿಂದ ಕೈ ತೊಳೆಯುವುದನ್ನು ಅಭ್ಯಾಸ ಮಾಡಬೇಕು. ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್‌ಗಳನ್ನು ಬಳಸಿ ಕೈಗಳು ಸ್ವಚ್ಛವಾಗಿದ್ದರೂ ಸೋಪು ಮತ್ತು ನೀರಿನಿಂದ ಕೈ ತೊಳೆಯಬೇಕು. ರೋಗ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಭೇಟಿ ಮಾಡುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಲು ಮಾಸ್ಕ್ ಧರಿಸಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್, ಕರವಸ್ತ್ರ ಉಪಯೋಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು” ಎಂದು ತಿಳಿಸಿದರು.
For Daily Updates WhatsApp ‘HI’ to 7406303366









